ನವದೆಹಲಿ ; ಶನಿವಾರದಿಂದ ಭಾರತದಲ್ಲಿ 18 ರಿಂದ 44 ವರ್ಷದೊಳಗಿನ ಜನರಿಗೆ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ. ಆದರೆ, ವಿವಿಧ ರಾಜ್ಯಗಳು ಲಸಿಕೆಯ ಕೊರತೆ ಇದೆ ಎಂದು ಹೇಳುತ್ತಿವೆ.
ಇದುವರೆಗೂ ಲಸಿಕೆ ಅಭಿಯಾನ ಕೈಗೊಂಡ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಅಂಕಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಇದುವರೆಗೂ ಹೆಚ್ಚು ಜನರಿಗೆ ಲಸಿಕೆ ನೀಡಿರುವುದರಲ್ಲಿ ಗುಜರಾತ್ ರಾಜ್ಯ ಮೊದಲ ಸ್ಥಾನದಲ್ಲಿದೆ. ಕೇಂದ್ರಾಡಳಿತ ಪದೇಶಗಳಲ್ಲಿ ಲಡಾಖ್ ಮೊದಲ ಸ್ಥಾನದಲ್ಲಿದೆ.
ಜನವರಿ 16ರಂದು ದೇಶದಲ್ಲಿ ಕೋವಿಡ್ ವಿರುದ್ಧದ ಲಸಿಕೆ ನೀಡುವ ಮೊದಲ ಹಂತದ ಅಭಿಯಾನ ಆರಂಭಿಸಲಾಯಿತು. ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ವರ್ಕರ್‌ಗಳಿಗೆ ಲಸಿಕೆ ನೀಡಲಾಯಿತು. ಮಾರ್ಚ್ 1ರಿಂದ 60 ವರ್ಷ ಮೇಲ್ಪಟ್ಟವರು, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಆರಂಭಿಸಲಾಯಿತು.
ಇದುವರೆಗೂ ಭಾರತದಲ್ಲಿ 15,22,45,179 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. 12,54,86,929 ಜನರು ತಮ್ಮ ಮೊದಲ ಹಂತದ ಕೋವಿಡ್ ವಿರುದ್ಧದ ಲಸಿಕೆಯನ್ನು ಪಡೆದಿದ್ದಾರೆ. 2,67,58,250 ಜನರು ಎರಡು ಡೋಸ್ ಸಹ ಪಡೆದಿದ್ದಾರೆ.
ಚಿಕ್ಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚು ಜನರಿಗೆ ಕೋವಿಡ್ ವಿರುದ್ಧದ ಲಸಿಕೆಯನ್ನು ನೀಡಿವೆ. ಲಡಾಖ್‌ನಲ್ಲಿ ತನ್ನ ಜನಸಂಖ್ಯೆಯ ಶೇ 11ರಷ್ಟು ಜನರಿಗೆ ಲಸಿಕೆ ನೀಡಿದೆ. ಅರ್ಧದಷ್ಟು ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.
ಯಾವ ರಾಜ್ಯಗಳು;
ರಾಜ್ಯಗಳ ಪೈಕಿ ಗುಜರಾತ್ ಮತ್ತು ರಾಜಸ್ಥಾನಗಳು ಲಸಿಕೆ ನೀಡಿರುವುದರಲ್ಲಿ ಪಟ್ಟಿಯಲ್ಲಿ ಮೇಲಿವೆ. ಗುಜರಾತ್ ರಾಜ್ಯದ ಶೇ 3.42ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ಶೇ 14.2ರಷ್ಟು ಜನರು ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಶೇ 13.6ರಷ್ಟು ಜನರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಒಟ್ಟು ಎರಡೂ ಹಂತದ ಲಸಿಕೆಯನ್ನು ಶೇ 2.77ರಷ್ಟು ಜನರು ರಾಜ್ಯದಲ್ಲಿ ಪಡೆದಿದ್ದಾರೆ ಎಂದು ಅಂಕಿ-ಸಂಖ್ಯೆಗಳು ಹೇಳುತ್ತಿವೆ.
ಇಡೀ ದೇಶದಲ್ಲಿ ಶೇ 1.97ರಷ್ಟು ಜನರು ಪೂರ್ಣವಾಗಿ ಲಸಿಕೆ ಪಡೆದುಕೊಂಡಿದ್ದಾರೆ. ಶೇ 9.24ರಷ್ಟು ಜನರು ಮೊದಲ ಡೋಸ್ ಪಡೆದಿದ್ದಾರೆ. ಸಿಕ್ಕಿಂ, ತ್ರಿಪುರ ರಾಜ್ಯಗಳು ಸಹ ಹೆಚ್ಚು ಜನರಿಗೆ ಲಸಿಕೆ ನೀಡಿದ ಪಟ್ಟಿಯಲ್ಲಿವೆ.
ಲಸಿಕೆ ಬಳಕೆಯಾಗಿಲ್ಲ; ಲಕ್ಷದ್ವೀಪ, ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದ ಲಸಿಕೆ ಬಳಕೆಯಾಗದೇ ಹಾಳಾಗಿದೆ. ಲಕ್ಷದ್ವೀಪದಲ್ಲಿ ಶೇ 9.76 ಮತ್ತು ತಮಿಳುನಾಡಿನಲ್ಲಿ 8.83ರಷ್ಟು ಲಸಿಕೆ ಬಳಕೆಯಾಗದೆ ಹಾಳಾಗಿದೆ.
ಭಾರತದಲ್ಲಿ ಪ್ರಸ್ತುತ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ಮಾತ್ರ ನೀಡಲಾಗುತ್ತಿದೆ. ಮೊದಲ ಹಂತದ ಲಸಿಕೆ ಪಡೆದ 28 ರಿಂದ 56 ದಿನಗಳ ಒಳಗೆ 2ನೇ ಹಂತದ ಲಸಿಕೆಯನ್ನು ಪಡೆಯಬೇಕಿದೆ.
ದೇಶದಲ್ಲಿ ಇದುವರೆಗೂ ಶೇ 47.80ಯಷ್ಟು ಮಹಿಳೆಯರು, ಶೇ 52.18ರಷ್ಟು ಪುರುಷರು ಲಸಿಕೆಯನ್ನು ಪಡೆದಿದ್ದಾರೆ. ಶೇ 90.67ರಷ್ಟು ಕೋವಿಶೀಲ್ಡ್ ಮತ್ತು ಶೇ 9.32ರಷ್ಟು ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿದೆ.