ನವದೆಹಲಿ: ಕೋವಿಡ್-19 ಲಸಿಕೆ ನೀಡುವುದರಲ್ಲಿ ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಪ್ರತ್ಯೇಕ ಆದ್ಯತೆಯ ಗುಂಪು ಮಾಡುವುದು ಯುಕ್ತವಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದೆ.
"ಮೇ. 1 ರಿಂದ 18 ವರ್ಷದ ವಯಸ್ಸಿನ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಪಡೆಯಲು ಅವಕಾಶ ನೀಡಿರುವುದರಿಂದ ಮಾನಸಿಕ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರೂ ಇದೇ ವ್ಯಾಪ್ತಿಗೆ ಬರಲಿದ್ದಾರೆ. ಆದ್ದರಿಂದ ಅವರಿಗೆ ಪ್ರತ್ಯೇಕ ಆದ್ಯತೆಯ ಗುಂಪನ್ನು ರಚಿಸುವುದು ಸೂಕ್ತವಲ್ಲ" ಎಂದು ಕೇಂದ್ರ ಸರ್ಕಾರ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಲಸಿಕೆ ನೀಡುವುದಕ್ಕೆ ಸಂಬಂಧಿಸಿದ ರಾಷ್ಟ್ರೀಯ ತಜ್ಞರ ತಂಡ (ಎನ್‌ಇಜಿವಿಎಸಿ) ಮಾ.22 ರಂದು ನಡೆಸಿದ ಸಭೆಯಲ್ಲಿ ಆದ್ಯತೆಯ ಗುಂಪುಗಳನ್ನು ರಚಿಸುವ ಸಂಬಂಧ ಚರ್ಚೆ ನಡೆಸಿದ್ದು, ಡಬ್ಲ್ಯುಹೆಚ್‌ಒ ಮಾರ್ಗಸೂಚಿಗಳು, ವೈಜ್ಞಾನಿಕ ಪುರಾವೆಗಳು, ನೀತಿ ತತ್ವಗಳ ಆಧಾರದಲ್ಲಿ ರಚನೆಯಾಗಬೇಕೆಂಬ ನಿರ್ಧಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಈಗಿರುವ ಅರ್ಹತೆಯನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಲಸಿಕೆಗೆ ಸಂಬಂಧಿಸಿದಂತೆ ಆದ್ಯತೆಯ ಜನಗಳನ್ನು ಗುರುತಿಸುವುದು, ಲಸಿಕೆ ನಿರ್ವಹಣೆ ಸೇರಿದಂತೆ ಎಲ್ಲಾ ಆಯಾಮಗಳಿಂದಲೂಸ ಸಲಹೆ ನೀಡುವುದಕ್ಕಾಗಿ ಕಳೆದ ವರ್ಷ ಆಗಸ್ಟ್ ನಲ್ಲಿ ಎನ್‌ಇಜಿವಿಎಸಿಯನ್ನು ರಚಿಸಲಾಗಿತ್ತು.
ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿವವರನ್ನು ಆದ್ಯತೆಯಾಗಿ ಪರಿಗಣಿಸಬೇಕೆಂಬ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ. ಮನೆ ಇಲ್ಲದ, ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ನೀತಿ ರೂಪಿಸಬೇಕೆಂದು ನಿರ್ದೇಶನ ಕೋರಿ ಅಡ್ವೊಕೇಟ್ ಗೌರವ್ ಕುಮಾರ್ ಬನ್ಸಾಲ್ ಕೋರಿದ್ದರು.