ನವದೆಹಲಿ: 'ದೇಶದಲ್ಲಿ ಕೋವಿಡ್-19 ಹೊಸ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ದೇಶದಲ್ಲಿ ಇದುವರೆಗೆ 2 ಕೋಟಿಗಿಂತಲೂ ಹೆಚ್ಚು ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
ಕಳೆದ ನಾಲ್ಕು ದಿನಗಳಲ್ಲಿ ಒಟ್ಟು ಮೂರನೇ ಬಾರಿ ಹೊಸ ಪ್ರಕರಣಗಳಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿ ಇದುವರೆಗೆ ಒಟ್ಟು 2,00,79,599 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಂದೇ ದಿನ 3,43,144 ಹೊಸ ಪ್ರಕರಣಗಳು ವರದಿಯಾಗಿವೆ. ನಿತ್ಯ 3,44,776 ಮಂದಿ ಚೇತರಿಸಿಕೊಳ್ಳುತ್ತಿದ್ದು, ಹತ್ತು ರಾಜ್ಯಗಳಲ್ಲಿ ಚೇತರಿಕೆಯ ಪ್ರಮಾಣ ಶೇ 71.16ಕ್ಕೆ ಏರಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಮಹಾರಾಷ್ಟ್ರದಲ್ಲಿ ಒಂದೇ ದಿನ 42,582 ಪ್ರಕರಣಗಳು, ಕೇರಳದಲ್ಲಿ 39,955 ಹಾಗೂ ಕರ್ನಾಟಕದಲ್ಲಿ 35,297 ಹೊಸ ಪ್ರಕರಣಗಳು ಪತ್ತೆಯಾಗಿವೆ.
ದೇಶದಲ್ಲಿ ಇದುವರೆಗೆ 31 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಕೋವಿಡ್ ಪ್ರಕರಣಗಳ ಪ್ರಮಾಣ ಶೇ 7.72ರಷ್ಟು ಹೆಚ್ಚಾಗಿದೆ. ಆದರೆ, ನಿತ್ಯದ ವರದಿಯಾಗುವ ಹೊಸ ಪ್ರಕರಣಗಳಲ್ಲಿ ಶೇ 20.08ರಷ್ಟು ಪ್ರಮಾಣ ಇಳಿಕೆಯಾಗಿದೆಎಂದು ಸಚಿವಾಲಯವು ತಿಳಿಸಿದೆ.
ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 37,04,893ಕ್ಕೆ ಇಳಿಕೆಯಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಪ್ರಕರಣಗಳಲ್ಲಿ 5,632 ಪ್ರಕರಣಗಳಷ್ಟು ಕುಸಿತವಾಗಿದೆ. ಅಂತೆಯೇ ಮರಣದ ಪ್ರಮಾಣ ಶೇ 1.09ರಷ್ಟಿದೆ. 24ಗಂಟೆಗಳ ಅವಧಯಲ್ಲಿ ಒಟ್ಟು 4 ಸಾವಿರ ಮಂದಿ ಸಾವಿಗೀಡಾಗಿದ್ದಾರೆ.
ಹತ್ತು ರಾಜ್ಯಗಳಲ್ಲಿ ಮರಣದ ಪ್ರಮಾಣ ಶೇ 72.70ರಷ್ಟು ಇದ್ದುಲ, ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ 850 ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ 344 ಮಂದಿ ಸಾವಿಗೀಡಾಗಿದ್ದಾರೆ.
ರಾಜ್ಯಗಳಿಗೆ 1.92 ಕೋಟಿ ಲಸಿಕೆ ಪೂರೈಕೆ
ಮೇ 16ರಿಂದ 31ರೊಳಗೆ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಒಟ್ಟು 1.92 ಕೋಟಿ ಡೋಸ್‌ಗಳನ್ನು ಉಚಿತವಾಗಿ ಪೂರೈಕೆ ಮಾಡಲಿದೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಶುಕ್ರವಾರ ತಿಳಿಸಿದೆ.
ಲಸಿಕೆಗಳ ಹಂಚಿಕೆ ವಿತರಣಾ ವೇಳಾಪಟ್ಟಿಯನ್ನು ಮುಂಚಿತವಾಗಿಯೇ ಹಂಚಿಕೊಳ್ಳಲಾಗುತ್ತದೆ. ನಿಗದಿಪಡಿಸಿದ ಪ್ರಮಾಣಗಳ ಸರಿಯಾದ ಬಳಕೆಯನ್ನು ಖಚಿತಪಡಿಸಲು ಹಾಗೂ ಲಸಿಕೆಯನ್ನು ವ್ಯರ್ಥಗೊಳಿಸದಿರಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರಾಡಳಿತ ಪ್ರದೇಶಗಳು ಹಾಗೂ ರಾಜ್ಯಗಳಿಗೆ ಆರೋಗ್ಯ ಸಚಿವಾಲಯವು ಸೂಚಿಸಿದೆ.
ಕೋವಿಶೀಲ್ಡ್‌ನ 1.63 ಕೋಟಿ ಡೋಸ್ ಹಾಗೂ ಕೋವ್ಯಾಕ್ಸಿನ್‌ನ 29.49 ಲಕ್ಷ ಡೋಸ್‌ಗಳನ್ನು ಪೂರೈಕೆ ಮಾಡಲಾಗುತ್ತದೆ.