ನವದೆಹಲಿ: ಕೋವಿಡ್-19 ಎರಡನೇ ಮುಂಗಡ ಹಣವನ್ನು ಖಾತೆಯಿಂದ ಹಿಂತೆಗೆಯುವುದಕ್ಕೆ ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದೆ. ಕೋವಿಡ್-19 ನ ಎರಡನೇ ಅಲೆಯಲ್ಲಿ ಅಗತ್ಯತೆಗಳು ಸರಿದೂಗಿಸಿಕೊಳ್ಳುವುದಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಇಪಿಎಫ್‌ಒ ಈ ಅವಕಾಶ ಕಲ್ಪಿಸಿದೆ.
ಮೂರು ತಿಂಗಳ ಬೇಸಿಕ್ ವೇತನ (ಬೇಸಿಕ್ ವೇತಕ+ ಡಿಎ) ಅಥವಾ ಸದಸ್ಯರ ಪಿಎಫ್ ಖಾತೆಯಲ್ಲಿರುವ ಶೇ.75 ರಷ್ಟು ಹಣ ಇವೆರಡರಲ್ಲಿ ಯಾವುದು ಕಡಿಮೆ ಮೊತ್ತ ಆಗುತ್ತದೆಯೋ ಅದನ್ನು ತೆಗೆಯಲು ಸದಸ್ಯರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ
ಇಪಿಎಫ್‌ಒ ನ ಚಂದಾದಾರರಿಗೆ ಕೋವಿಡ್-19 ಎರಡನೇ ಅಲೆ ಸಂದರ್ಭದಲ್ಲಿ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಅನುಕೂಲವಾಗಲೆಂದು, ಇಪಿಎಫ್‌ಒ ಎರಡನೇ ಮರುಪಾವತಿ ಅಗತ್ಯವಿಲ್ಲದ ಕೋವಿಡ್-19 ಮುಂಗಡ ಹಣವನ್ನು ತೆಗೆದುಕೊಳ್ಳುವ ಸೌಲಭ್ಯ ಕಲ್ಪಿಸಿದೆ ಎಂದು ಕಾರ್ಮಿಕ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಾರ್ಚ್ 2020 ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ನ ಅಡಿಯಲ್ಲಿ ವಿಶೇಷ ಹಣ ಹಿಂತೆಗೆತ ಸೌಲಭ್ಯವನ್ನು ಇಪಿಎಫ್‌ಒ ಗ್ರಾಹಕರಿಗೆ ಒದಗಿಸಲಾಗಿತ್ತು. ಇದಕ್ಕಾಗಿ ನಿಯಮಗಳಿಗೆ ತಿದ್ದುಪಡಿಯನ್ನೂ ಜಾರಿಗೆ ತರಲಾಗಿತ್ತು.
15,000 ರೂಪಾಯಿಗಿಂತಲೂ ಕಡಿಮೆ ವೇತನ ಹೊಂದಿರುವವರಿಗೆ ಕೋವಿಡ್-19 ಮುಂಗಡ ಹಣ ಸೌಲಭ್ಯ ನೆರವಾಗಲಿದೆ. ಈ ವರೆಗೂ ಇಂತಹ 31 ಲಕ್ಷ ಕೋವಿಡ್-19 ಮುಂಗಡ ಹಣದ ಅರ್ಜಿಗಳನ್ನು ಸಂಸ್ಥೆ ಇತ್ಯರ್ಥಗೊಳಿಸಿದ್ದು 18,698.15 ಕೋಟಿ ರೂಪಾಯಿ ಮೊತ್ತವನ್ನು ನೀಡಿದೆ.
ಕೋವಿಡ್-19 ಎರಡಾನೇ ಅವಧಿಯಲ್ಲಿ ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್ ನ್ನೂ ಸಾಂಕ್ರಾಮಿಕ ಎಂದು ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಪಿಎಫ್‌ಒ ತನ್ನ ಸದಸ್ಯರಿಗೆ ನೆರವು ನೀಡಲು ಮುಂದಾಗಿದೆ.