ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದ ಬಾಧೆಯಿಂದ ನಲುಗಿರುವ ಮನುಕುಲ ಇನ್ನೆಷ್ಟು ಕಾಲ ಲಾಕ್ ಡೌನ್? ಈ ಕೊರೋನಾ ನಮ್ಮ ನಡುವೆ ಇನ್ನೆಷ್ಟು ದಿನಗಳಿರುತ್ತೆ? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರಗಳನ್ನು ಎದುರು ನೋಡುತ್ತಿದೆ. ಈ ಪೈಕಿ ಲಸಿಕೆ ಪರಿಣಾಮಕಾರಿತ್ವದ ಅವಧಿಯ ಕುರಿತ ಪ್ರಶ್ನೆಯೂ ಒಂದಾಗಿದೆ.
ಈ ಪ್ರಶ್ನೆಗೆ ಕರ್ನಾಟಕ ಮೂಲದ ಸೂಕ್ಷ್ಮರೋಗಾಣು ಶಾಸ್ತ್ರಜ್ಞರು ಮಾಹಿತಿ ನೀಡಿದ್ದು, ಕೋವಿಡ್-19 ಲಸಿಕೆಯ ಪರಿಣಾಮಕಾರಿತ್ವದ ಅವಧಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ವರದಿಯ ಪ್ರಕಾರ ವೆಬಿನಾರ್ ಒಂದರಲ್ಲಿ ಡಾ. ವಿ ರವಿ ಅವರು ಮಾತನಾಡಿದ್ದು, ಕೋವಿಡ್-19 ಲಸಿಕೆ ಕನಿಷ್ಟ ಒಂದು ವರ್ಷಗಳ ಕಾಲ ಇರಲಿದೆ ಎಂದು ಹೇಳಿದ್ದಾರೆ.
ಈಗಿನ ಪುರಾವೆಗಳ ಪ್ರಕಾರ ಲಸಿಕೆ ಪಡೆದು ಒಂದು ವರ್ಷದ ಅವಧಿಯಲ್ಲಿ ಅಪಾಯಕಾರಿ ರೂಪಾಂತರಿ ಕೊರೋನಾ ವೈರಾಣುಗಳು ಎದುರಾಗದೇ ಇದ್ದಲ್ಲಿ ಲಸಿಕೆಯಿಂದ ಓರ್ವ ವ್ಯಕ್ತಿ 2-3 ವರ್ಷಗಳ ಕಾಲ ಕೊರೋನಾ ವೈರಾಣುವಿನಿಂದ ರಕ್ಷಣೆ ನೀಡುತ್ತದೆ ಎಂದು ಹೇಳಿದ್ದಾರೆ.
ಮಹಿಳಾ ಪತ್ರಕರ್ತರ ಸಂಘಟನೆಯಿಂದ ಆಯೋಜಿಸಲಾಗಿದ್ದ ಕೋವಿಡ್-3 ನೇ ಅಲೆ, ಲಸಿಕೆ, ರಕ್ಷಣೆ ಎಂಬ ವಿಷಯವಾಗಿ ವೆಬಿನಾರ್ ನಲ್ಲಿ ಕರ್ನಾಟಕ ರಾಜ್ಯ ಕೋವಿಡ್ ಕಾರ್ಯಪಡೆ ಸಮಿತಿಯ ಸದಸ್ಯರಾಗಿರುವ ಡಾ.ರವಿ ಮಾತನಾಡಿದ್ದಾರೆ.
ಜೆನೆಟಿಕ್ ಸೀಕ್ವೆನ್ಸಿಂಗ್ ಮೂಲಕ ಹೊಸ ಕೊರೋನಾ ವೈರಸ್ ನ ರೂಪಾಂತರಿಗಳನ್ನು ಗುರುತಿಸುವ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಇದೇ ವೇಳೆ ಭಾರತದಲ್ಲಿ ಮೂರನೇ ಅಲೆಯನ್ನು ತಪ್ಪಿಸಲು ಸಾಧ್ಯವಿಲ್ಲ. ಭಾರತೀಯರಲ್ಲಿರುವ ರೋಗನಿರೋಧಕ ಶಕ್ತಿಯಿಂದ ಎರಡನೇ ಅಲೆ ಬರಲು ಸಾಧ್ಯವೇ ಇಲ್ಲ ಎಂದು ಕಳೆದ ವರ್ಷ ಹಲವರು ನಿರಾಕರಿಸಿದ್ದರು, ಆದರೆ ಈಗ ಭಾರತ ಎರಡನೇ ಅಲೆಯನ್ನು ಎದುರಿಸುತ್ತಿದೆ ಎಂದು ಡಾ.ರವಿ ಹೇಳಿದ್ದಾರೆ.