ನವದೆಹಲಿ: ಭಯೋತ್ಪಾದನಾ ನಿಗ್ರಹ ಕಮಾಂಡೋ ಪಡೆ ಎನ್‌ಎಸ್ ಜಿ ಕೋವಿಡ್-19 ಸಂಬಂಧಿತ ಸಾವಿನ ಮೊದಲ ಪ್ರಕರಣವನ್ನು ಪ್ರಕಟಿಸಿದೆ. ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್‌ಎಸ್ ಜಿ)ಯ ಅಧಿಕಾರಿಯೊಬ್ಬರು ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ.
ಗ್ರೂಪ್ ಕಮಾಂಡರ್ (ಕೋ-ಆರ್ಡಿನೇಷನ್) ಬಿ.ಕೆ. ಝಾ (53) ಅವರನ್ನು ಗ್ರೇಟರ್ ನೋಯ್ಡಾದ ಕೇಂದ್ರ ಸೇನಾ ಪೊಲೀಸ್ ಪಡೆಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಸೋಂಕು ತೀವ್ರವಾದ ಪರಿಣಾಮ ಮೇ 05 ರಂದು ಅಧಿಕಾರಿ ಸಾವನ್ನಪ್ಪಿದ್ದಾರೆ ಎಂದು ಎನ್‌ಎಸ್ ಜಿ ಹೇಳಿದೆ.
ಎನ್ ಎಸ್ ಜಿ ವ್ಯಾಪ್ತಿಯಲ್ಲಿ ವರದಿಯಾಗಿರುವ ಮೊದಲ ಸಾವು ಇದಾಗಿದೆ. ಈ ಅಧಿಕಾರಿ ಎನ್ ಎಸ್ ಜಿ ಪಡೆಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಯಾಚರಣೆಯ ವಿಭಾಗದಲ್ಲಿ ಇರಲಿಲ್ಲ ಎಂದು ಎನ್‌ಎಸ್ ಜಿ ಸ್ಪಷ್ಟನೆ ನೀಡಿದೆ. ಬಿಹಾರ ಮೂಲದವರಾದ ಝಾ, 1993 ರ ಬ್ಯಾಚ್ ನ ಬಿಎಸ್‌ಎಫ್ ಕೇಡರ್ ನ ಅಧಿಕಾರಿಯಾಗಿದ್ದರು.
ಬಿಎಸ್‌ಎಫ್ ನಿಂದ 2018 ರಲ್ಲಿ ಅವರನ್ನು ಎನ್‌ಎಸ್ ಜಿಗೆ ನಿಯುಕ್ತಿಗೊಳಿಸಲಾಗಿತ್ತು. ಇದಕ್ಕೂ ಮುನ್ನ ಝಾ ಅವರು ಬಿಎಸ್‌ಎಫ್ ಮಹಾನಿರ್ದೇಶಕರ ಪ್ರಧಾನ ಸಿಬ್ಬಂದಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಉಭಯ ಪಡೆಗಳೂ ಝಾ ಅವರ ಸಾವಿಗೆ ಸಂತಾಪ ಸೂಚಿಸಿವೆ. ಎನ್‌ಎಸ್ ಜಿ ಅಂಕಿ-ಅಂಶಗಳ ಪ್ರಕಾರ ತನ್ನ ವ್ಯಾಪ್ತಿಯಲ್ಲಿ ಈ ವರೆಗೂ 430 ಕೋವಿಡ್-19 ಪಾಸಿಟಿವ್ ಪ್ರಕರಣಗಳನ್ನು ಹೊಂದಿತ್ತು ಈ ಪೈಕಿ 59 ಸಕ್ರಿಯ ಪ್ರಕರಣಗಳಿವೆ. ಎನ್‌ಎಸ್ ಜಿ ಹಾಗೂ ಎನ್ ಡಿಆರ್ ಎಫ್ ನಲ್ಲಿ ಒಟ್ಟು 66,000 ಕೋವಿಡ್-19 ಪ್ರಕರಾಣಗಳಿದ್ದು, 7,900 ಸಕ್ರಿಯ ಪ್ರಕರಣಗಳಿವೆ. ಕೋವಿಡ್-19 ನಿಂದ ಈ ವರೆಗೂ 248 ಸಾವುಗಳು ಸಂಭವಿಸಿವೆ.