ನವದೆಹಲಿ: ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾದ ಐವರ್ಮೆಕ್ಟಿನ್ ಔಷಧಿ ಬಗ್ಗೆ ಡಬ್ಲ್ಯುಹೆಚ್‌ಒ ಎಚ್ಚರಿಕೆ ನೀಡಿದೆ.
ಪಾರಾಸಿಟಿಕ್ ಸೋಂಕುಗಳನ್ನು ನಿವಾರಿಸುವುದಕ್ಕಾಗಿ ಅನುಸರಿಸಲಾಗುತ್ತಿದ್ದ ಚಿಕಿತ್ಸಾ ವಿಧಾನದಲ್ಲಿ ಬಾಯಿಯಿಂದ ತೆಗೆದುಕೊಳ್ಳುವ ಐವರ್ಮೆಕ್ಟಿನ್ ಔಷಧಿಯನ್ನು ಕೋವಿಡ್-19 ರೋಗಿಗಳಿಗೂ ನೀಡುವುದಕ್ಕೆ ಭಾರತ ಸರ್ಕಾರ ಪ್ರಕಟಿಸಿರುವ ಕೋವಿಡ್-19 ನಿರ್ವಹಣೆ ನಿಯಮಗಳಲ್ಲಿ ಸಲಹೆ ನೀಡಲಾಗಿತ್ತು.
ಆದರೆ ಇದರ ವಿರುದ್ಧ ಡಬ್ಲ್ಯುಹೆಚ್‌ಒ ಸಾರ್ವತ್ರಿಕ ಬಳಕೆಯ ವಿರುದ್ಧ ಎಚ್ಚರಿಸಿದೆ. ಪ್ರಾರಂಭಿಕ ಹಂತದ ಸೋಂಕು ಲಕ್ಷಣಗಳಿರುವವರಿಗೆ ಐವರ್ಮೆಕ್ಟಿನ್ ಔಷಧ ಬಳಕೆ ಮಾಡಲು ಹೇಳಲಾಗಿತ್ತಾದರೂ ಆದರೆ ಕೋವಿಡ್-19 ಗೆ ಈ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಪುರಾವೆಗಳು ಇಲ್ಲ ಎಂದು ಹೇಳಲಾಗುತ್ತಿದೆ.
ಹೊಸ ರೋಗಗಳಿಗೆ ಔಷಧಗಳನ್ನು ನೀಡುವಾಗ ಸುರಕ್ಷತೆ ಹಾಗೂ ಪರಿಣಾಮಕಾರಿತ್ವ ಬಹಳ ಮುಖ್ಯವಾಗುತ್ತದೆ. ಕ್ಲಿನಿಕಲ್ ಟ್ರಯಲ್ ಗಳನ್ನು ಹೊರತುಪಡಿಸಿ ಕೋವಿಡ್-19 ಗೆ ಐವರ್ಮೆಕ್ಟಿನ್ ನೀಡುವುದರ ವಿರುದ್ಧ ಡಬ್ಲ್ಯುಹೆಚ್‌ಒ ಶಿಫಾರಸು ಮಾಡುತ್ತದೆ ಎಂದು ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.