ನವದೆಹಲಿ: 'ಕೋವಿಡ್ ಸೋಂಕಿನ ಆರಂಭದ ಹಂತದಲ್ಲೇ ಸ್ಟಿರಾಯ್ಡ್ ಅಂಶವುಳ್ಳ ಔಷಧ ಬಳಕೆ ಅಪಾಯಕಾರಿ. ಇದರಿಂದ ದೇಹದ ಆಮ್ಲಜನಕ ಮಟ್ಟ ಕುಸಿತವಾಗುವ ಸಾಧ್ಯತೆ ಇದೆ' ಎಂದು ದೆಹಲಿಯ ಏಮ್ಸ್ ಆಸ್ಪತ್ರೆ ಮುಖ್ಯಸ್ಥ ಡಾ. ರಣದೀಪ್ ಗುಲೆರಿಯಾ ಎಚ್ಚರಿಕೆ ನೀಡಿದ್ದಾರೆ.
ಸೋಂಕಿನ ಆರಂಭಿಕ ಹಂತದಲ್ಲೇ ಸ್ಟಿರಾಯ್ಡ್ ಔಷಧಗಳ ಬಳಕೆಯಿಂದ ದೇಹದಲ್ಲಿ ಆಮ್ಲಜನಕದ ಮಟ್ಟ ಕುಸಿಯುವ ಸಾಧ್ಯತೆ ಇದೆ. ಸೌಮ್ಯ ಲಕ್ಷಣಗಳಿದ್ದವರು ಸ್ಟಿರಾಯ್ಡ್ ಔಷಧ ಸೇವಿಸಿ ದೇಹದಲ್ಲಿ ಆಮ್ಲಜನಕದ ಮಟ್ಟ ಕುಸಿದು ಆಸ್ಪತ್ರೆಗೆ ದಾಖಲಾದ ಉದಾಹರಣೆಗಳೂ ಇವೆ ಎಂದು ಗುಲೆರಿಯಾ ಹೇಳಿರುವುದಾಗಿ ರಾಷ್ಟ್ರಮಟ್ಟದ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಈ ಮಧ್ಯೆ, ಮೊದಲ ಹಂತದಲ್ಲೇ ಸ್ಟಿರಾಯ್ಡ್‌ಗಳನ್ನು ಸೇವಿಸುವುದು ವೈರಸ್ ಉಲ್ಬಣಗೊಳ್ಳಲು ನೆರವಾಗಬಲ್ಲದು ಹಾಗೂ ಗಂಭೀರ ನ್ಯುಮೋನಿಯಾಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿರುವುದಾಗಿ 'ಲೈವ್ ಮಿಂಟ್' ಸುದ್ದಿತಾಣ ವರದಿ ಮಾಡಿದೆ.
ಸೋಂಕಿನ ಆರಂಭಿಕ ಹಂತದಲ್ಲಿ ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳಬಾರದು, ವಿಶೇಷವಾಗಿ ಯುವಕರು ಎಂದೂ ಅವರು ಹೇಳಿದ್ದಾರೆ.
ರೆಮ್‌ಡಿಸಿವಿರ್, ಪ್ಲಾಸ್ಮಾ (ಚಿಕಿತ್ಸಾ ವಿಧಾನ), ಟೊಸಿಲಿಜುಮಾಬ್‌ನಂತಹ ಔಷಧಗಳ ತುರ್ತು ಬಳಕೆಗಷ್ಟೇ ಅವಕಾಶ ನೀಡಲಾಗಿದೆ. ಇವುಗಳ ಪ್ರಯೋಜನಗಳ ಬಗ್ಗೆ ಸೀಮಿತ ದತ್ತಾಂಶಗಳು ಮಾತ್ರ ಲಭ್ಯವಿವೆ. ಈ ಔಷಧಗಳನ್ನು ಯಾವಾಗ ತೆಗೆದುಕೊಳ್ಳಬೇಕು ಎಂಬುದೂ ಬಹುಮುಖ್ಯ ಎಂದು ಅವರು ಹೇಳಿದ್ದಾರೆ.
ಕೋವಿಡ್ ಚಿಕಿತ್ಸೆಯ ಆರಂಭಿಕ ಹಂತದ ಹಲವು ಚಿಕಿತ್ಸಾ ವಿಧಾನಗಳ ಬಗ್ಗೆಯೂ ಅವರು ಎಚ್ಚರಿಕೆ ನೀಡಿದ್ದು, ಈ ವಿಧಾನಗಳು ನಂತರ ಹಾನಿಕಾರಕವಾಗಬಲ್ಲವು ಎಂದೂ ಹೇಳಿದ್ದಾರೆ.
ಕೋವಿಡ್ ಪರಿಶೀಲನೆಯ ಆತಂಕದಲ್ಲಿ ಸಿಟಿ ಸ್ಕ್ಯಾನ್ ಕಡೆಗೆ ಜನರು ನುಗ್ಗುತ್ತಿರುವ ಬಗ್ಗೆಯೂ ಗುಲೇರಿಯಾ ಈಚೆಗೆ ಕಳವಳ ವ್ಯಕ್ತಪಡಿಸಿದ್ದರು. ಸಿಟಿ ಸ್ಕ್ಯಾನ್‌ನಿಂದ ದೇಹಕ್ಕೆ ಒಳ್ಳೆಯದಕ್ಕಿಂತಲೂ ಹೆಚ್ಚಿನ ಹಾನಿಯೇ ಸಂಭವಿಸುತ್ತದೆ ಹಾಗೂ ಅಡ್ಡ ಪರಿಣಾಮಗಳೂ ಉಂಟಾಗುತ್ತವೆ. ಒಂದು ಸಿಟಿ ಸ್ಕ್ಯಾನ್ ಎದೆಗೆ ಮಾಡಿಸುವ 300ರಿಂದ 400 ಎಕ್ಸ್‌ರೇಗಳಿಗೆ ಸಮಾನ. ಅತಿಯಾಗಿ ಸಿಟಿ ಸ್ಕ್ಯಾನ್ ಬಳಕೆಯಿಂದ ಕ್ಯಾನ್ಸರ್ ಆಹ್ವಾನಿಸಿದಂತಾಗುತ್ತದೆ ಎಂದು ಅವರು ಹೇಳಿದ್ದರು.