ಅಹಮದಾಬಾದ್: ಹಸುವಿನ ಸೆಗಣಿ ಥೆರಪಿ ಕುರಿತು ಗುಜರಾತಿನ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹಸುವಿನ ಸಗಣಿಯನ್ನು ಮೈಗೆ ಮೆತ್ತಿಕೊಳ್ಳುವುದರಿಂದ ಕೊರೋನಾ ವೈರಸ್ ವಿರುದ್ಧ ರಕ್ಷಣೆ ನೀಡುವುದಿಲ್ಲ, ಬದಲು, ಇನ್ನಿತರ ಸೋಂಕಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಹಸುವಿನ ಸಗಣಿ ಥೆರಪಿಯಿಂದ ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿಂದ
ಸಣ್ಣ ಗುಂಪೊಂದು ಶ್ರೀ ಸ್ವಾಮಿನಾರಾಯಣ ಗುರುಕುಲ ವಿಶ್ವವೈದ್ಯ ಪ್ರತಿಷ್ಠಾನ ನಡೆಸುತ್ತಿರುವ ಗೋಶಾಲೆಗೆ ಬಂದಿದೆ. ಅಲ್ಲಿ ಸುಮಾರು 200 ಹಸುಗಳನ್ನು ಪೋಷಿಸಲಾಗುತ್ತಿದೆ.
ಹಸುವಿನ ಸೆಗಣಿ ಹಾಗೂ ಗೋಮೂತ್ರವನ್ನು ತಮ್ಮ ದೇಹಕ್ಕೆ ಹಾಕಿಕೊಳ್ಳಲು ಸುಮಾರು 15 ಜನರು ಪ್ರತಿ ಭಾನುವಾರ ಕಳೆದ ಒಂದು ತಿಂಗಳಿನಿಂದ ಇಲ್ಲಿಗೆ ಬರುತ್ತಿದ್ದಾರೆ. ನಂತರ ಹಾಲಿನೊಂದಿಗೆ ಅದನ್ನು ಸ್ವಚ್ಛಗೊಳಿಸುತ್ತಿರುವುದಾಗಿ ಶ್ರೀ ಸ್ವಾಮಿನಾರಾಯಣ ಗುರುಕುಲ ವಿಶ್ವವೈದ್ಯ ಪ್ರತಿಷ್ಠಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕೆಲ ಮುಂಚೂಣಿ ಕಾರ್ಯಕರ್ತರು, ಮೆಡಿಕಲ್ ಸ್ಟೋರ್ ಗಳಲ್ಲಿ ಕೆಲಸ ಮಾಡುವವರು ಕೂಡಾ ಈ ಥೆರಪಿ ಪಡೆದುಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಈ ಥೆರಪಿ ಜನರಿಗೆ ನಿಜವಾಗಿಯೂ ನೆರವಾಗಲಿದೆ ಎಂಬುದು ಗೊತ್ತಿಲ್ಲ. ಮೈಗೆ ಹಸುವಿನ ಸೆಗಣಿ ಮೆತ್ತಿಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂಬ ಬಗ್ಗೆ ಯಾವುದೇ ಸಂಶೋಧನೆ ಹೇಳಿಲ್ಲ ಎಂದು ಗಾಂಧಿನಗರದ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನಿರ್ದೇಶಕ ಡಾ. ದಿಲೀಪ್ ಮಾವ್ಲಂಕರ್ ಹೇಳಿದ್ದಾರೆ.
ಹಸುವಿನ ಸೆಗಣಿ ಥೆರಪಿ ಅವಾಸ್ತವಿಕ ಎಂದಿರುವ ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಮಹಿಳಾ ವಿಭಾಗದ ಮುಖ್ಯಸ್ಥೆ ಡಾ. ಮೊನಾ ದೇಸಾಯಿ. ಸೆಗಣಿ ತ್ಯಾಜ್ಯವಲ್ಲದೆ ಬೇರೆನೂ ಇಲ್ಲ. ಹಸುವಿನ ಸೆಗಣಿ ಹಾಗೂ ಮೂತ್ರವನ್ನು
ದೇಹಕ್ಕೆ ಹಾಕಿಕೊಳ್ಳುವ ಮುನ್ನ ವೈದ್ಯರನ್ನು ಸಂಪರ್ಕಿಸಿ, ಇಂತಹ ಥೆರಪಿಗಳಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ.
ಸೆಗಣಿ ಬಳಕೆಯಿಂದ ಹಲವಾರು ಶಿಲೀಂಧ್ರಗಳು ನಮ್ಮ ದೇಹ ಪ್ರವೇಶಿಸುವ ಸಾಧ್ಯತೆಯಿದ್ದು, ನಿಮಗೆ ಸೋಂಕು ತಗುಲಲಿದೆ. ಜನರು ಸ್ವಲ್ಪ ಎಚ್ಚರಿಕೆ ವಹಿಸಬೇಕು, ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳಬಾರದು ಎಂದು ದೇಸಾಯಿ ಹೇಳಿದ್ದಾರೆ.