ನವದೆಹಲಿ: ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾಗಿರುವ ಗುಜರಾತ್ ಗೆ ತಕ್ಷಣದ ಪರಿಹಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ 1,000 ಕೋಟಿ ರೂ. ನೆರವು ಘೋಷಿಸಿದ್ದಾರೆ.
ಚಂಡಮಾರುತದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಗುಜರಾತ್ ಮತ್ತು ಡಿಯುನಲ್ಲಿ ಉನಾ(ಗಿರ್ - ಸೋಮನಾಥ್), ಜಾಫ್ರಾಬಾದ್ (ಅಮ್ರೆಲಿ), ಮಾಹುವಾ (ಭಾವನಗರ) ಪ್ರದೇಶಗಳಲ್ಲಿ ಪ್ರಧಾನಿ ಮೋದಿ ಅವರು ಇಂದು ವೈಮಾನಿಕ ಸಮೀಕ್ಷೆ ನಡೆಸಿದ ನಂತರ, ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಬಳಿಕ ಈ ಪರಿಹಾರ ಘೋಷಣೆ ಮಾಡಿದ್ದಾರೆ.
ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಮತ್ತು ದಮನ್ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡಮಾರುತ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರ ಘೋಷಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಮೋದಿ, ತೌಕ್ತೆ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಲು ಗುಜರಾತ್ ಮತ್ತು ಡಿಯು ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದೆ. ಚಂಡಮಾರುತದಿಂದ ಹಾನಿಗೊಳಗಾದ ಎಲ್ಲಾ ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.
ಎಲ್ಲಾ ರಾಜ್ಯಗಳಲ್ಲಿ ತೌಕ್ತೆ ಚಂಡಮಾರುತದಿಂದ ಪ್ರಾಣ ಕಳೆದುಕೊಂಡವರ ರಕ್ತಸಂಬಂಧಿಗಳಿಗೆ 2 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದನ್ನು ನಿರ್ಣಯಿಸಲು ಕೇಂದ್ರ ಸರ್ಕಾರವು ರಾಜ್ಯಕ್ಕೆ ಭೇಟಿ ನೀಡಲು ಅಂತರ-ಸಚಿವರ ತಂಡವನ್ನು ನಿಯೋಜಿಸಲಿದ್ದು, ಅದರ ಆಧಾರದ ಮೇಲೆ ಹೆಚ್ಚಿನ ನೆರವು ನೀಡಲಾಗುವುದು ಎಂದು ಪ್ರಧಾನಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ, ಚಂಡಮಾರುತ ಪೀಡಿತ ಪ್ರದೇಶಗಳಲ್ಲಿನ ಮೂಲಸೌಕರ್ಯಗಳ ಪುನಃಸ್ಥಾಪನೆ ಮತ್ತು ಪುನರ್ನಿರ್ಮಾಣಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಪ್ರಧಾನಿ ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ.
ತೌಕ್ತೆ ಚಂಡಮಾರುತವು ಗುಜರಾತ್ ನಲ್ಲಿ 70,000 ವಿದ್ಯುತ್ ಕಂಬಗಳು, 80,000 ಕ್ಕೂ ಹೆಚ್ಚು ಮರಗಳನ್ನು ಬುಡಮೇಲಾಗಿಸಿದ್ದು, ಸಾವಿರಾರು ಮನೆಗಳು ಮತ್ತು ರಸ್ತೆಗಳಿಗೆ ಹಾನಿಯಾಗಿವೆ. ಗುಜರಾತ್ ನಲ್ಲಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ.