ತಿರುವನಂತಪುರ: ಈ ಶೈಕ್ಷಣಿಕ ವರ್ಷದಲ್ಲೂ ಆನ್‍ಲೈನ್ ಮೂಲಕವೇ ತರಗತಿಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಶಿಕ್ಷಣ ತಜ್ಞರು ತಿಳಿಸಿದ್ದಾರೆ. ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹೊರತು ಶಾಲೆಗಳನ್ನು ಸಾಮಾನ್ಯವಾಗಿ ತೆರೆಯಲು ಸಾಧ್ಯವಾಗದು. ಆದರೂ ಜೂನ್ 1 ರಂದು ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಸಾಧ್ಯತೆಯನ್ನೂ ಪರಿಗಣಿಸಲಾಗುತ್ತಿದೆ.
ಸೋಂಕಿನ ನಿರಂತರ ಹರಡುವಿಕೆಯ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷವನ್ನು ಜೂನ್ 1 ರಂದು ಪ್ರಾರಂಭಿಸುವುದು ಶಿಕ್ಷಣ ಇಲಾಖೆಗೆ ಸವಾಲಾಗಿದೆ. ಲಾಕ್‍ಡೌನ್ ಮುಂದುವರಿದಂತೆ ಪಠ್ಯಪುಸ್ತಕ ವಿತರಣೆ ಸ್ಥಗಿತಗೊಂಡಿದೆ. ಹಿಂದಿನಂತೆ ಶೈಕ್ಷಣಿಕ ವರ್ಷವನ್ನು ಆನ್‍ಲೈನ್‍ನಲ್ಲಿ ನಡೆಸುವ ಯೋಜನೆ ಮುಂದಿರಿಸಲಾಗಿದೆ.
ಸೋಂಕು ವ್ಯಾಪಕತೆ ನಿಯಂತ್ರಣಕ್ಕೆ ಬಾರದಿದ್ದರೆ, ಆನ್‍ಲೈನ್ ತರಗತಿಗಳು ಈ ವರ್ಷದ ಡಿಸೆಂಬರ್ ವರೆಗೆ ಮುಂದುವರಿಯಬಹುದು. ಕೋವಿಡ್ ಜೊತೆಗೆ, ಭಾರಿ ಮಳೆಯಿಂದಾಗಿ ಅನೇಕ ಶಾಲೆಗಳನ್ನು ಪರಿಹಾರ ಶಿಬಿರಗಳಾಗಿ ಮಾರ್ಪಡಿಸಲಾಗಿದೆ. ಶಿಕ್ಷಣ ಇಲಾಖೆಯು ಜೂನ್ 1 ರಿಂದಲೇ ಅಧಿಕೃತ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಲು ಸಜ್ಜಾಗುತ್ತಿರುವುದಾಗಿ ತಿಳಿದುಬಂದಿದೆ.
ಪಾಲಕರು ಏನು ಮಾಡಬಹುದು:
ಮುಖ್ಯವಾಗಿ ಒಂದನೇ ತರಗತಿ ಮಕ್ಕಳನ್ನು ಗಮನಿಸಿ ಆನ್ ಲೈನ್ ತರಗತಿಗಳು ನಮ್ಮ ಪ್ರದೇಶಗಳಿಗೆ ಸೂಕ್ತವಾಗುತ್ತಿಲ್ಲ ಎಂಬುದು ಕಳೆದ ಶೈಕ್ಷಣಿಕ ವರ್ಷದ ಅನುಭವ ಅಧ್ಯಯನಗಳು ದೃಢಪಡಿಸಿವೆ. ಈ ಹಿನ್ನೆಲೆಯಲ್ಲಿ ಅಕ್ಷರಾಭ್ಯಾಸ, ಕನಿಷ್ಠ ಮೂರೋ, ನಾಲ್ಕೋ ಪದಗಳನ್ನು ಬರೆಯುವುದು, ಓದುವುದು ದೊಡ್ಡ ಸವಾಲಾಗಲಿದೆ. ಈ ಹಿನ್ನೆಲೆಯಲ್ಲಿ ಪೋಷಕರು ದೃತಿಗೆಡುತ್ತಿರುವುದೂ ಹೌದು. ಈ ನಿಟ್ಟಿನಲ್ಲಿ ಪೋಷಕರು ಅಥವಾ ಮನೆಯಲ್ಲಿರುವ ಹಿರಿಯರು ಪುಟಾಣಿಗಳಿಗೆ ಪ್ರತಿನಿತ್ಯ ನಿಶ್ಚಿತ ಅವಧಿಗಳ ಕಾಲ ಆಟಗಳೊಂದಿಗೆ ಸಮಧಾನದಿಂದ ಕಲಿಸುವ ಯತ್ನಗಳಿಗೆ ಮುನ್ನುಗ್ಗಬೇಕಾಗುತ್ತದೆ. ಈ ಬಗ್ಗೆ ಅನುಭವಗಳ ಅಗತ್ಯವಿದ್ದವರು ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ಯೂಟ್ಯೂಬ್ ಗೈಡ್ ಗಳಿಂದ ಸೂಕ್ತ ಮಾರ್ಗದರ್ಶನ ಪಡೆಯಲೇ ಬೇಕಾಗುತ್ತದೆ.