ನವದೆಹಲಿ: ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗುರುವಾರ (ಮೇ 13) 2 ರಿಂದ 18 ವರ್ಷದ ಮಕ್ಕಳ ಮೇಲೆ ಭಾರತ್ ಬಯೋಟೆಕ್‌ನ ಕೊವ್ಯಾಕ್ಸೀನ್ ಪ್ರಯೋಗ ನಡೆಸಲು ಅನುಮತಿ ನೀಡಿದೆ. ಭಾರತ್ ಬಯೋಟೆಕ್ ತನ್ನ ದ್ವಿತೀಯ ಹಾಗೂ ತೃತೀಯ ಹಂತದ ಪ್ರಯೋಗಗಳನ್ನು "525 ಆರೋಗ್ಯವಂತ ಸ್ವಯಂಸೇವಕರ" ಮೇಲೆ ನಡೆಸಲಾಗುವುದು ಎಂದು ಹೇಳಿದೆ.
ಪ್ರಯೋಗವು ಒಂದನೇ ದಿನ ಹಾಗೂ 28ನೇ ದಿನದಂದು ನೀಡಲಾಗುವ ಲಸಿಕೆಗಳ ಎರಡು ಡೋಸ್ ಗಳನ್ನು ಒಳಗೊಂಡಿರುತ್ತದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಮಕ್ಕಳ ಮೇಲೆ ಕೋವಿಡ್ ಲಸಿಕೆ ಪರೀಕ್ಷೆ ನಡೆಯಲಿದೆ.
ಸರ್ಕಾರದ ಹೇಳಿಕೆಯ ಪ್ರಕಾರ, ಎಚ್ಚರಿಕೆಯಿಂದ ಯೋಚಿಸಿದ ನಂತರ ಲಸಿಕೆಗಳ ಬಗ್ಗೆ ತಜ್ಞರ ಸಮಿತಿಯ ಶಿಫಾರಸನ್ನು ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ಒಪ್ಪಿಕೊಂಡಿದೆ. ಏಮ್ಸ್, ದೆಹಲಿ, ಏಮ್ಸ್, ಪಾಟ್ನಾ ಮತ್ತು ನಾಗ್ಪುರದ ಮೆಡಿಟ್ರಿನಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ಕಡೆಗಳಲ್ಲಿ ಈ ಪ್ರಯೋಗ ನಡೆಯಲಿದೆ.
"ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ ಸಿಒ) ನ ಕೋವಿಡ್ -19 ಕುರಿತ ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅರ್ಜಿಯನ್ನು ಕೋವ್ಯಾಕ್ಸೀನ್ ಡೋಸ್ ಗಳ ಸುರಕ್ಷತೆ, ಪ್ರತಿಕ್ರಿಯಾತ್ಮಕತೆ ಮತ್ತು ಇಮ್ಯುನೊಜೆನೆಸಿಟಿ ಮೌಲ್ಯಮಾಪನ ಮಾಡಲು ಎರಡು, ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿತ್ತು. ಅದು 2 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಪ್ರಯೋಗಿಸಲು ಅನುಮತಿಗಾಗಿ ಕೋರಿದ್ದಾಗ ಅದರ ಕುರಿತು ವಿವರವಾದ ಚರ್ಚೆಯ ನಂತರ,ಸಂಪೂರ್ಣ ವೈರಿಯನ್ ಇನ್ ಆಕ್ಟಿವೇಟೆಡ್ ಕೊರೋನಾ ಲಸಿಕೆಯ ಕ್ಲಿನಿಕಲ್ ಪ್ರಯೋಗದ ಮಧ್ಯಂತರ ಸುರಕ್ಷತಾ ಡೇಟಾವನ್ನು ಅಧ್ಯಯನದ ಮೂರನೇ ಹಂತಕ್ಕೆ ಮುಂದುವರಿಯುವ ಮೊದಲು ಸಂಸ್ಥೆಯು ಸಿಡಿಎಸ್ ಸಿಒ ಗೆ ಸಲ್ಲಿಸಬೇಕು ಎಂಬ ಷರತ್ತಿಗೆ ಒಳಪಟ್ಟು ಅನುಮತಿಸಿದೆ." ಅಧಿಕಾರಿಯೊಬ್ಬರು ಹೇಳಿದ್ದಾರೆ.