ನವದೆಹಲಿ: 'ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಾದ್ಯಂತ ಈವರೆಗೆ 270 ವೈದ್ಯರು ಸೋಂಕಿನಿಂದ ಮೃತಪಟ್ಟಿದ್ದಾರೆ' ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಮಂಗಳವಾರ ಹೇಳಿದೆ.
ಸೋಂಕಿನಿಂದ ಸಾವಿಗೀಡಾದ ವೈದ್ಯರಲ್ಲಿ ಐಎಂಎ ಮಾಜಿ ಅಧ್ಯಕ್ಷ ಡಾ.ಕೆ.ಕೆ ಅಗರವಾಲ್ ಕೂಡ ಒಬ್ಬರು. ಕೆ.ಕೆ ಅಗರವಾಲ್ ಅವರು ಸೋಮವಾರ ನಿಧನರಾದರು.
'ಬಿಹಾರದಲ್ಲಿ 78 ವೈದ್ಯರು ಸೋಂಕಿನಿಂದ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ, ದೆಹಲಿ ಮತ್ತು ಆಂಧ್ರಪ್ರದೇಶದಲ್ಲಿ ಕ್ರಮವಾಗಿ 37, 29 ಮತ್ತು 22 ವೈದ್ಯರು ಸಾವಿಗೀಡಾಗಿದ್ದಾರೆ. ಕೋವಿಡ್ ಮೊದಲ ಅಲೆ ವೇಳೆ 748 ವೈದ್ಯರು ಸೋಂಕಿಗೆ ಬಲಿಯಾಗಿದ್ದರು' ಎಂದು ಐಎಂಎ ಮಾಹಿತಿ ನೀಡಿದೆ.
'ಕಳೆದ ವರ್ಷ 748 ವೈದ್ಯರು ಮೃತಪಟ್ಟಿದ್ದರೆ, ಈ ಬಾರಿ ಅತಿ ಕಡಿಮೆ ಸಮಯದಲ್ಲಿ 270 ವೈದ್ಯರು ಸೋಂಕಿಗೆ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ಎರಡನೇ ಅಲೆಯು ತೀವ್ರವಾಗಿದೆ. ವಿಶೇಷವಾಗಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಮಾರಕವಾಗಿ ಪರಿಣಮಿಸುತ್ತಿದೆ' ಎಂದು ಐಎಂಎ ತಿಳಿಸಿದೆ.