ನವದೆಹಲಿ: ದೇಶದಲ್ಲಿ ಈವರೆಗೂ ಒಟ್ಟು ಜನಸಂಖ್ಯೆಯ ಶೇ.2ಕ್ಕಿಂತಲೂ ಕಡಿಮೆ ಮಂದಿ ಕೋವಿಡ್-19 ಪೀಡಿತರಾಗಿದ್ದಾರೆ. ಶೇ.98 ರಷ್ಟು ಜನರು ಇನ್ನೂ ಸೋಂಕಿಗೆ ಒಳಗಾಗಬಹುದು ಅಥವಾ ದುರ್ಬಲರಾಗಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಈವರೆಗೂ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವರದಿಯ ಹೊರತಾಗಿಯೂ ಶೇ.2 ಕ್ಕಿಂತಲೂ ಕಡಿಮೆ ಜನಸಂಖ್ಯೆಗಷ್ಟೇ ಸೋಂಕು ಹರಡುವಂತೆ ತಡೆಯುವಲ್ಲಿ ಸಾಧ್ಯವಾಗಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.
ಕಳೆದ 15 ದಿನಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿರುವುದನ್ನು ಉಲ್ಲೇಖಿಸಿರುವ ಸರ್ಕಾರ, ಈವರೆಗೂ ದೇಶದಲ್ಲಿ ಒಟ್ಟು ಸಂಖ್ಯೆಯಲ್ಲಿ ಶೇ. 1.8 ರಷ್ಟು ಮಂದಿ ಮಾತ್ರ ಕೋವಿಡ್ ಪೀಡಿತರಾಗಿದ್ದಾರೆ. 98 ರಷ್ಟು ಜನಸಂಖ್ಯೆ ಇನ್ನೂ ಸೋಂಕಿಗೆ ಒಳಗಾಗಬಹುದು ಅಥವಾ ದುರ್ಬಲತೆಗೊಳ್ಳಬಹುದು ಎಂದು ಹೇಳಿದೆ.
ಮೇ 3 ರಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಶೇ.17.13 ರಷ್ಟಿತ್ತು, ಅದೀಗ ಶೇ.13. 3ಕ್ಕೆ ಇಳಿದಿದೆ. ಎಂಟು ರಾಜ್ಯಗಳಲ್ಲಿ 1 ಲಕ್ಷಕ್ಕಿಂತ ಹೆಚ್ಚಿನ ಸಕ್ರಿಯ ಪ್ರಕರಣಗಳಿವೆ. 22 ರಾಜ್ಯಗಳಲ್ಲಿ ಶೇಕಡಾ 15 ರಷ್ಟು ಪಾಸಿಟಿವಿಟಿ ಪ್ರಕರಣಗಳಿವೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಬಿಹಾರ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಪಾಟಿಟಿವಿಟಿ ದರದಲ್ಲಿ ಇಳಿಕೆಯಾಗುತ್ತಿದೆ ಎಂದು ಸರ್ಕಾರ ಹೇಳಿದೆ.
ಕಳೆದ ಎರಡು ವಾರಗಳಲ್ಲಿ 199 ಜಿಲ್ಲೆಗಳಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಪಾಸಿಟಿವಿಟಿ ದರದಲ್ಲಿ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.