ನವದೆಹಲಿ: ಕಳೆದ ಎರಡು ವರ್ಷಗಳಿಂದ 2,000 ರೂ. ನೋಟುಗಳ ಮುದ್ರಣವನ್ನು ಸ್ಥಗಿತಗೊಳಿಸಿರುವ ಆರ್‌ಬಿಐ ಪ್ರಜ್ಞಾಪೂರ್ವಕವಾಗಿ ಪಿಂಕ್ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಳ್ಳುತ್ತಿದೆ.
2021ರ ಮಾರ್ಚ್ 1ರವರೆಗೆ 57,757 ಕೋಟಿ ರೂ. ಮೌಲ್ಯದ 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದೆ. ಗುರುವಾರ ಬಿಡುಗಡೆಯಾದ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ. 2020ರಲ್ಲಿ ಪಿಂಕ್ ನೋಟುಗಳ ಮೌಲ್ಯ 5,47,952 ಕೋಟಿ ರೂ.ಗಳಾಗಿದ್ದು ಈಗ ಅದು ಎಫ್‌ವೈ 21ರಲ್ಲಿ 4,90,195 ಕೋಟಿ ರೂ.ಗೆ ಇಳಿದಿದೆ.
ಕಳೆದ ಒಂದು ವರ್ಷದಲ್ಲಿ 57,757 ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಚಲಾವಣೆಯಿಂದ ಹೊರತೆಗೆಯಲಾಗಿದೆ, ಆದರೂ ಅದು ನಕಲಿ ಅಥವಾ ಇತರ ಕಾರಣಗಳಿಂದಾಗಿತ್ತೆ ಎಂಬುದು ಸ್ಪಷ್ಟವಾಗಿಲ್ಲ. ವಾಸ್ತವವಾಗಿ, ಇಂತಹ ಶುದ್ಧೀಕರಣವು 2019ರಿಂದಲೂ ನಡೆದುಕೊಂಡು ಬಂದಿದ್ದು ಅಂದು 14,400 ಕೋಟಿ ಮೌಲ್ಯದ ನೋಟುಗಳನ್ನು ಹೊರಗಿಟ್ಟಿತ್ತು. 2020ನೇ ವರ್ಷದಲ್ಲಿ ಶೇ. 22.6ರಷ್ಟಿದ್ದ ಪಿಂಕ್ ನೋಟುಗಳ ಚಲಾವಣೆ 2021ರ ಮಾರ್ಚ್ ವೇಳೆಗೆ ನೋಟುಗಳ ಚಲಾವಣೆ 17.3ರಷ್ಟಕ್ಕೆ ಇಳಿದಿದೆ.
ಮೌಲ್ಯದ ಪ್ರಕಾರ, ಚಲಾವಣೆಯಲ್ಲಿರುವ ಒಟ್ಟು 28.26 ಲಕ್ಷ ಕೋಟಿ ರೂಪಾಯಿ ಪೈಕಿ 2020ರಲ್ಲಿ 2,000 ರೂ. ನೋಟುಗಳು ಮೌಲ್ಯ 5.47 ಲಕ್ಷ ಕೋಟಿ ಆಗಿದ್ದು ಇದು 21ರ ವೇಳೆ 4.9 ಲಕ್ಷ ಕೋಟಿ ರೂ.ಗೆ ಇಳಿದಿದೆ. ಅಂತೆಯೇ, ನೋಟುಗಳ ಪ್ರಮಾಣವು 20ರಲ್ಲಿ 2,739 ಮಿಲಿಯನ್ ಇದ್ದು ಅದು 21ರಲ್ಲಿ 2,451 ಮಿಲಿಯನ್ ಗೆ ಇಳಿದಿದೆ.
2016ರವರೆಗೆ 1000 ರೂ. ನೋಟು ಅತ್ಯಧಿಕ ಮುಖಬೆಲೆಯದಾಗಿತ್ತು. ಆದರೆ 2016ರಲ್ಲಿ 1000 ಮತ್ತು 500 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಮಾಡಲಾಗಿತ್ತು. ತಕ್ಷಣಕ್ಕೆ ಚಲಾವಣೆಗಾಗಿ 2000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಮತ್ತೊಂದೆಡೆ, ಕಳೆದ ಹಣಕಾಸು ವರ್ಷದಲ್ಲಿ ನಗದು ಬೇಡಿಕೆಯನ್ನು ಉಳಿಸಿಕೊಳ್ಳಲು ಆರ್‌ಬಿಐ 500 ರೂ. ನೋಟುಗಳ ಮುದ್ರಣವನ್ನು ಹೆಚ್ಚಿಸಿತು. ಇದು ಈಗ ಚಲಾವಣೆಯಲ್ಲಿರುವ ಒಟ್ಟು ನೋಟುಗಳ 68.4% ರಷ್ಟಿದೆ. ಕಳೆದ ವರ್ಷ 60.8% ರಷ್ಟಿತ್ತು.
ಒಟ್ಟಾರೆಯಾಗಿ, ಮೌಲ್ಯದ ಪ್ರಕಾರ ಮಾರ್ಚ್ 2021ರ ವೇಳೆಗೆ 500 ಮತ್ತು 2,000 ರೂ. ನೋಟುಗಳ ಪಾಲು 85.7ರಷ್ಟಿದ್ದು ಹಿಂದಿನ ವರ್ಷ 83.4ರಷ್ಟಿತ್ತು.