ನವದೆಹಲಿ: ಮಾರ್ಚ್ 2022 ರೊಳಗೆ ರಷ್ಯಾದ ಸುಮಾರು 361 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಕೊರೋನಾ ಲಸಿಕೆ ಭಾರತಕ್ಕೆ ಬರಲಿದ್ದು, ಅಂದಾಜು 36 ಕೋಟಿ ಭಾರತೀಯರಿಗೆ ಅದನ್ನು ನೀಡಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೊದಲ ಹಂತವಾಗಿ ಮೇ 1 ರಂದು 1.5 ಮಿಲಿಯನ್ ಡೋಸ್ ಲಸಿಕೆಯನ್ನು ಭಾರತಕ್ಕೆ ರವಾನಿಸಲಾಗಿದೆ.ಎರಡನೇ ಹಂತದಲ್ಲಿ ಇಷ್ಟೇ ಸಂಖ್ಯೆಯ ಲಸಿಕೆ ಶೀಘ್ರದಲ್ಲಿಯೇ ಭಾರತಕ್ಕೆ ರವಾನೆಯಾಗಲಿದೆ. ಮೇ ತಿಂಗಳಲ್ಲಿ 3 ಮಿಲಿಯನ್ , ಜೂನ್ ನಲ್ಲಿ 5 ಮತ್ತು ಜುಲೈನಲ್ಲಿ 10 ಮಿಲಿಯನ್ ಸೇರಿದಂತೆ 18 ಮಿಲಿಯನ್ ಸ್ಪುಟ್ನಿಕ್ ವಿ ಡೋಸ್ ಗಳನ್ನು ಭಾರತ ಪಡೆಯಲಿದೆ.ರಷ್ಯಾದ ಸಾರ್ವಭೌತ್ವ
ಸಂಪತ್ತು ನಿಧಿ ಲಸಿಕೆಗೆ ಹಣ ನೀಡಿದ್ದು, 850 ಮಿಲಿಯನ್ ಡೋಸ್ ಉತ್ಪಾದನೆಗೆ ಭಾರತದ ಐದು ಕಂಪನಿಗಳೊಂದಿಗೆ ಸಹಿ ಹಾಕಿದೆ.
ಭಾರತದಲ್ಲಿ ಡೋಸ್ ಉತ್ಪಾದಿಸುವುದು ಮಾತ್ರವಲ್ಲದೇ, ಬೇರೆ ರಾಷ್ಟ್ರಗಳಿಗೂ ರಫ್ತು ಮಾಡಬಹುದಾಗಿದೆ. ಜೂನ್ 2020ರಿಂದ ಮಾರ್ಚ್ 2021ರವರೆಗೂ ಸುಮಾರು 238 ಮಿಲಿಯನ್ ಡೋಸ್ ನ್ನು ಭಾರತದಲ್ಲಿಯೇ ಉತ್ಪಾದಿಸಲಾಗಿದೆ. ಭಾರತವು 11 ಮಿಲಿಯನ್ ಡೋಸ್ ನ್ನು ಅಂತಿಮ ರೂಪದಲ್ಲಿ ಪಡೆಯುವ ಸಾಧ್ಯತೆಯಿದೆ.
ಕೋವಿಶೀಲ್ಡ್, ಕೋವಾಕ್ಸಿನ್ ನಂತರ ಭಾರತೀಯ ನಿಯಂತ್ರಣ ಪ್ರಾಧಿಕಾರದಿಂದ ಅನುಮತಿ ಪಡೆದಿರುವ ಮೂರನೇ ಲಸಿಕೆ ಸ್ಪುಟ್ನಿಕ್ ವಿ ಆಗಿದೆ.60ಕ್ಕೂ ಹೆಚ್ಚು ರಾಷ್ಟ್ರಗಳು ಈ ಲಸಿಕೆ ನೀಡಲು ಅನುಮತಿ ನೀಡಿವೆ. ಮೇ 5 ರಂದು ಜಾಗತಿಕವಾಗಿ 20 ಮಿಲಿಯನ್ ಗೂ ಹೆಚ್ಚು ಜನರು ಸ್ಪುಟ್ನಿಕ್ ವಿ ಲಸಿಕೆ ಮೊದಲ ಇಂಜೆಕ್ಷನ್ ಪಡೆದಿದ್ದಾರೆ.