ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಪ್ರತಿನಿತ್ಯವೂ ಲಕ್ಷಾಂತರ ಮಂದಿ ಸೋಂಕಿಗೆ ಒಳಗಾಗುತ್ತಿದ್ದಾರೆ, ಸಾವಿರಾರು ಮಂದಿ ಬಲಿಯಾಗುತ್ತಿದ್ದಾರೆ.
ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗಿವೆ.
ನಿನ್ನೆ ಒಂದೇ ದಿನ 4 ಲಕ್ಷದ 12 ಸಾವಿರದ 262 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2 ಕೋಟಿಯ 10 ಲಕ್ಷದ 77 ಸಾವಿರದ 410ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ ದೇಶದಲ್ಲಿ 3 ಸಾವಿರದ 980 ಮಂದಿ ಕೊರೋನಾಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 23 ಲಕ್ಷದ 01 ಸಾವಿರದ 68ಕ್ಕೇರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 35 ಲಕ್ಷದ 66 ಸಾವಿರದ 398ಕ್ಕೆ ಏರಿಕೆಯಾಗಿದೆ.
ಈ ಮಧ್ಯೆ, ಕಳೆದ 24 ಗಂಟೆಗಳಲ್ಲಿ 3 ಲಕ್ಷದ 29 ಸಾವಿರದ 113 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 1 ಕೋಟಿಯ 72 ಲಕ್ಷದ 80 ಸಾವಿರದ 844ಕ್ಕೆ ತಲುಪಿದೆ.
ಭಾರತದಲ್ಲಿ ಒಂದೇ ದಿನ 19 ಲಕ್ಷದ 23 ಸಾವಿರದ 131 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ 29 ಕೋಟಿಯ 67 ಲಕ್ಷದ 75 ಸಾವಿರದ 209 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.