ನವದೆಹಲಿ: ಅರಬ್ಬಿ ಸಮುದ್ರದಲ್ಲಿನ ಲಕ್ಷದ್ವೀಪದಲ್ಲಿ ಕೇಂದ್ರಿಕರಿಸಿದ್ದ ತೌಕ್ತೆ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು ಗುಜರಾತ್ ಕರಾವಳಿಯತ್ತ ಸಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಶನಿವಾರ ಬೆಳಿಗ್ಗೆ ಆಗ್ನೇಯ ಮತ್ತು ಪೂರ್ವ ಮಧ್ಯ ಅರಬ್ಬಿ ಸಮುದ್ರದ ಮೇಲೆ ಅಪ್ಪಳಿಸಿರುವ ತೌಕ್ತೆ ಚಂಡಮಾರುತ ಗುಜರಾತ್ ಕರಾವಳಿಯತ್ತ ಗಂಟೆಗೆ 160 ಕಿ.ಮೀ ವೇಗದಲ್ಲಿ ಸಾಗುತ್ತಿದೆ ಎಂದು ಐಎಂಡಿ ಟ್ವೀಟ್ ಮಾಡಿದೆ.
ತೌಕ್ತೆ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳಲ್ಲಿದು ಅರಬ್ಬಿ ಸಮುದ್ರದ ಕರಾವಳಿ ತೀರಗಳಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಐಎಂಡಿ ಅಧಿಕಾರಿಗಳು ಹೇಳಿದ್ದಾರೆ.
ಈ ಚಂಡಮಾರುತ ಮುಂದಿನ 12 ಗಂಟೆಗಳಲ್ಲಿ ಗುಜರಾತ್ ಕರಾವಳಿ ಅಪ್ಪಳಿಸುವ ಸಾಧ್ಯತೆ ಇದೆ. ಗಾಳಿಯ ವೇಗವನ್ನು ಅಂದಾಜಿಸಿದರೆ ಇದು ದುರ್ಬಲಗೊಳ್ಳುವ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜನೆ ಮಾಡಿದೆ.