ಬೀಜಿಂಗ್: 'ಚೀನಾದ ಯುನ್ನಾನ್ ಪ್ರಾಂತ್ಯದ ಯಾಂಗ್ಬಿ ಯಿ ಎಂಬ ಸ್ವಾಯತ್ತ ಪ್ರಾಂತ್ಯದಲ್ಲಿ ಶುಕ್ರವಾರ ಸರಣಿ ಭೂಕಂಪ ಸಂಭವಿಸಿದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. 27 ಮಂದಿಗೆ ಗಾಯಗಳಾಗಿವೆ' ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದರು.
'ಎಲ್ಲ 12 ಪ್ರಾಂತ್ಯಗಳಲ್ಲಿ ಹಾಗೂ ಡಾಲಿ ಬಾಯಿ ಸ್ವಾಯತ್ತ ಪ್ರಾಂತ್ಯದ ನಗರಗಳಲ್ಲಿ ಭೂಕಂಪದ ಅನುಭವವಾಗಿದ್ದು, ಯಾಂಗ್ಬಿ ಯಿಯಲ್ಲಿ ಅತಿ ಹೆಚ್ಚು ಹಾನಿಯಾಗಿದೆ' ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ(ಸಿಪಿಸಿ) ಮುಖ್ಯಸ್ಥ ಯಾಂಗ್ ಗುವಜಾಂಗ್ ಹೇಳಿದ್ದಾರೆ.
'ಭೂಕಂಪನದಿಂದಾಗಿ ಯಾಂಗ್ಬಿಯಲ್ಲಿ ಇಬ್ಬರು ಮತ್ತು ಯೋಂಗ್ಪಿಂಗ್ ಪ್ರಾಂತ್ಯದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 27 ಮಂದಿಗೆ ಗಾಯಗಳಾಗಿದ್ದು, ಇದರಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ' ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.