ನವದೆಹಲಿ: ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ 2ಡಿಜಿ ಔಷಧಿಯ 10 ಸಾವಿರ ಡೋಸ್ ಗಳ ಮೊದಲ ಭಾಗವನ್ನು ಮುಂದಿನ ವಾರ ಆರಂಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಿಳಿಸಿದೆ.
ಭವಿಷ್ಯದಲ್ಲಿ ಹೆಚ್ಚು ಬಳಕೆಗೆ ಲಭ್ಯವಾಗುವಂತೆ ಉತ್ಪಾದನೆಯನ್ನು ಹೆಚ್ಚಿಸಲು ಔಷಧ ತಯಾರಕರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಡಾ. ಅನಂತ್ ನಾರಾಯಣ್ ಭಟ್ ನೇತೃತ್ವದ ಡಿಆರ್ ಡಿಒ ವಿಜ್ಞಾನಿಗಳ ತಂಡವೊಂದು ಔಷಧಿಯನ್ನು ಅಭಿವೃದ್ಧಿಪಡಿಸಿದೆ ಎಂದು ಡಿಆರ್ ಡಿಒ ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಕರ್ನಾಟಕ ಆರೋಗ್ಯ ಮಂತ್ರಿ ಡಾ ಕೆ ಸುಧಾಕರ್ ಡಿಆರ್ ಡಿಒ ಕ್ಯಾಂಪಸ್ ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ವಿಜ್ಞಾನಿಗಳು ಸಚಿವರಿಗೆ 2-ಡಿಜಿ ಔಷಧಿ ಬಗ್ಗೆ ವಿವರಿಸಿದ್ದು ಕೋವಿಡ್ ವಿರುದ್ಧ ಹೋರಾಡಲು ಇದು ಬಹಳ ಉಪಯೋಗವಾಗಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೂ ಮುನ್ನ ಡಾ ಸುಧಾಕರ್ ಅವರು ಐಐಎಸ್ಸಿಯ ವಿಜ್ಞಾನಿಗಳ ತಂಡದ ಜೊತೆ ಸಂವಾದ ನಡೆಸಿದ್ದರು.
ಡಿಆರ್ ಡಿಒ ಅಭಿವೃದ್ಧಿಪಡಿಸಿರುವ 2-ಡಿಜಿ ಔಷಧಿ ಕೋವಿಡ್ ವಿರುದ್ಧ ಸೆಣಸಾಡಲು ಬಹಳ ಉಪಕಾರಿಯಾಗಲಿದ್ದು ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳ ಚಿಕಿತ್ಸೆಗೆ ಮತ್ತು ರೋಗಿಗಳು ಹೆಚ್ಚು ಆಕ್ಸಿಜನ್ ಮೇಲೆ ಅವಲಂಬಿತವಾಗುವುದನ್ನು ಇದು ತಪ್ಪಿಸಬಹುದು. ಪಿಎಂ-ಕೇರ್ಸ್ ಫಂಡ್ ನಡಿ 322.5 ಕೋಟಿ ರೂಪಾಯಿ ವೆಚ್ಚದಲ್ಲಿ 1.5 ಲಕ್ಷ ಘಟಕಗಳನ್ನು ಸಂಗ್ರಹಿಸಲಾಗುತ್ತದೆ.