ನವದೆಹಲಿ; ಭಾರತದ ವಿವಿಧ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಕ್ಸಿಜನ್, ಹಾಸಿಗೆ ಕೊರತೆ ಬಗ್ಗೆ ವಿವಿಧ ರಾಜ್ಯಗಳಲ್ಲಿ ದೂರುಗಳು ಕೇಳಿ ಬರುತ್ತಿವೆ. ಕೇಂದ್ರ ಸರ್ಕಾರ ಶನಿವಾರ ವರದಿಯೊಂದನ್ನು ಬಿಡುಗಡೆ ಮಾಡಿದೆ.
ದೇಶದಲ್ಲಿ 1.37 ಲಕ್ಷ ರೋಗಿಗಳು ಆಕ್ಸಿಜನ್ ವ್ಯವಸ್ಥೆಯಲ್ಲಿದ್ದಾರೆ. ಸುಮಾರು 50 ಸಾವಿರ ಕೋವಿಡ್ ಸೋಂಕಿತರು ಐಸಿಯುನಲ್ಲಿದ್ದಾರೆ. 14,500 ಜನರು ವೆಂಟಿಲೇಟರ್ ವ್ಯವಸ್ಥೆಯಲ್ಲಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ದೇಶದ ಕೋವಿಡ್ ಸೋಂಕಿತರ ಆಸ್ಪತ್ರೆ ಸ್ಥಿತಿ-ಗತಿ ಬಗ್ಗೆ ವರದಿ ಬಿಡುಗಡೆ ಮಾಡಿದೆ. ಕೋವಿಡ್ ಮೊದಲ ಅಲೆಗೆ ಹೋಲಿಕೆ ಮಾಡಿದರೆ 2ನೇ ಅಲೆ ಗಂಭೀರವಾಗಿದೆ ಎಂದು ವರದಿ ತಿಳಿಸಿದೆ.
ಮೊದಲ ಅಲೆಯ ಅವಧಿಯಲ್ಲಿ 2020ರ ಸೆಪ್ಟೆಂಬರ್‍ನಲ್ಲಿ 23,000 ಜನರು ದೇಶಾದ್ಯಂತ ಐಸಿಯುನಲ್ಲಿದ್ದರು. 4000 ಜನರು ವೆಂಟಿಲೇಟರ್‍ನಲ್ಲಿದ್ದರು. ಸುಮಾರು 40 ಸಾವಿರ ಜನರಿಗೆ ಆಕ್ಸಿಜನ್ ವ್ಯವಸ್ಥೆ ಬೇಕಾಗಿತ್ತು. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ನೇತೃತ್ವದಲ್ಲಿ ಶನಿವಾರ ನಡೆದ ಸಚಿವರ ಉನ್ನತ ಮಟ್ಟದ ಸಭೆಯಲ್ಲಿ ಈ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ. ಮೇ 7ರ ಪ್ರಕಾರ ಭಾರತದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 37.23 ಲಕ್ಷ ಆಗಿದೆ.
ಸಕ್ರಿಯ ಪ್ರಕರಣಗಳಲ್ಲಿ 49,894 ಜನರು ಐಸಿಯುವಿನಲ್ಲಿ, 14,521 ಜನರು ವೆಂಟಿಲೇಟರ್‍ನಲ್ಲಿ ಮತ್ತು 1,37,768 ಜನರು ಆಕ್ಸಿಜನ್ ವ್ಯವಸ್ಥೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಮೊದಲ ಅಲೆಗೆ ಹೋಲಿಕೆ ಮಾಡಿದರೆ 2ನೇ ಅಲೆಯಲ್ಲಿ ದೇಶದ ಸಕ್ರಿಯ ಪ್ರಕರಣಗಳ ಸಂಖ್ಯೆ 3.65 ಪಟ್ಟು ಹೆಚ್ಚಾಗಿದೆ. ಐಸಿಯುಗೆ ದಾಖಲಾಗುವ ಸೋಂಕಿತರ ಪ್ರಮಾಣ 2 ಪಟ್ಟು ಹೆಚ್ಚಳವಾಗಿದೆ. ವೆಂಟಿಲೇಟರ್ ಮೇಲಿನ ಅವಲಂಬನೆ 3.68ರಷ್ಟು ಹೆಚ್ಚಳವಾಗಿದೆ.
ಪ್ರತಿ ರಾಜ್ಯಗಳು ಸಹ ತಮ್ಮ ಹೆಲ್ತ್ ಬುಲೆಟಿನ್‍ನಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ, ಗುಣಮುಖಗೊಂಡವರ ಸಂಖ್ಯೆಯನ್ನು ಪ್ರತಿದಿನ ಬಿಡುಗಡೆ ಮಾಡುತ್ತವೆ.