ನವದೆಹಲಿ: ಎಲ್ಲಾ ವಿಷಯಗಳಿಗೆ ಸರಳೀಕೃತ ಮಾದರಿಯಲ್ಲಿ ಸಿಬಿಎಸ್‌ಇ ದ್ವಿತೀಯ ಪಿಯುಸಿ ಪರೀಕ್ಷೆಗೆ ಆದ್ಯತೆ ನೀಡಿ ಸುಮಾರು 30 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ತಿಳಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಪರೀಕ್ಷೆ ನಡೆಸುವ ಸಂಬಂಧ ಮೇ 23 ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಎರಡು ವಾರಗಳೊಳಗೆ ಸಮಗ್ರ ಸಲಹೆಗಳನ್ನು ಕಳುಹಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿತ್ತು.
ಮಕ್ಕಳ ಭವಿಷ್ಯ ಮತ್ತು ವೃತ್ತಿಯ ದೃಷ್ಟಿಯಲ್ಲಿ ಈ ಪರೀಕ್ಷೆ ಮಹತ್ವದ್ದಾಗಿದ್ದು, ದೆಹಲಿ ಮತ್ತು ಮಹಾರಾಷ್ಟ್ರ ಹೊರತುಪಡಿಸಿದಂತೆ ಸುಮಾರು 32 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೇಂದ್ರಕ್ಕೆ ತಿಳಿಸಿವೆ ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮತ್ತೊಂದೆಡೆ ಪರೀಕ್ಷಾ ಕೇಂದ್ರಗಳಲ್ಲಿ ಗುಂಪಾಗಿ ಸೇರಲು ಅವಕಾಶ ಕಲ್ಪಿಸುವುದರಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೋಂಕು ತಗುಲುವ ಅಪಾಯವಿದೆ. ಸೋಂಕು ಹರಡುವಿಕೆಗೆ ಪರೀಕ್ಷೆ ಕಾರಣವಾಗಬಹುದು ಎಂದು ದೆಹಲಿ ಮತ್ತು ಮಹಾರಾಷ್ಟ್ರ ಹೇಳಿದ್ದವು.
ತೆಲಂಗಾಣ, ರಾಜಸ್ಥಾನ ಮತ್ತು ತ್ರಿಪುರಾ ರಾಜ್ಯಗಳನ್ನು ಹೊರತುಪಡಿಸಿದರೆ, ಪ್ರತಿ 90 ನಿಮಿಷಗಳ ಅವಧಿಯಲ್ಲಿ ಸರಳೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕೆಂದು 29 ರಾಜ್ಯಗಳು ಹೇಳಿದ್ದವು. ಇದರಲ್ಲಿ ಹೆಚ್ಚಿನ ಪ್ರಶ್ನೆಗಳು ವಸ್ತುನಿಷ್ಠ ಅಥವಾ ಚಿಕ್ಕದಾದ ಉತ್ತರ ಮಾದರಿಯಂತಿರಬೇಕು ಎಂದು ತಮ್ಮ ಸಲಹೆ ನೀಡಿವೆ.
ರಾಜ್ಯಗಳಿಂದ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದು, ಅವುಗಳನ್ನು ವಿಶ್ಲೇಷಿಸುವ ಪ್ರಕ್ರಿಯೆಯಲ್ಲಿದ್ದೇವೆ. ಹೆಚ್ಚಿನ ರಾಜ್ಯಗಳು ಎಲ್ಲಾ ವಿಷಯಗಳಿಗೆ ಸರಳೀಕೃತ ಮಾದರಿಯ ಪರೀಕ್ಷೆ ನಡೆಸಲು ಮತ್ತು ಪರೀಕ್ಷೆಯಿಂದ ಫಲಿತಾಂಶಗಳವರೆಗೆ 45 ದಿನಗಳಲ್ಲಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒಲವು ತೋರಿವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಂದು ವೇಳೆ ಸಿಬಿಎಸ್‌ಇ-ಸಂಯೋಜಿತ ಎಲ್ಲಾ ಶಾಲೆಗಳಲ್ಲಿ ಪರೀಕ್ಷೆಗಳನ್ನು ನಡೆಸಿದರೆ, ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಾಗಿ ಗುಂಪು ಸೇರುವಿಕೆಯನ್ನು ಕಡಿಮೆ ಮಾಡುತ್ತದೆ. ಜೂನ್ 1ಕ್ಕೂ ಮುಂಚಿತವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು, ಮುಂದಿನ ಎರಡ್ಮೂರು ದಿನಗಳಲ್ಲಿ ನಾವು ಪ್ರಕಟಣೆ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.