ಇಡುಕ್ಕಿ: ಗಾಜಾ ಗಡಿಯಲ್ಲಿ ಹಮಾಸ್ ನಡೆಸಿದ ಮಾರ್ಟರ್ ಶೆಲ್ಲಿಂಗ್ ನಿಂದ ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಕೇರಳದ ಮಹಿಳೆ ಸಹಿತ ಮೂವರು ಮೃೃತರಾಾದ ಘಟನೆ ನಡೆದಿದೆ.
ಇಡುಕ್ಕಿ ಜಿಲ್ಲೆಯ ಸೌಮ್ಯ ಸಂತೋಷ್, ದಕ್ಷಿಣ ಇಸ್ರೇಲ್‌ನ ಕರಾವಳಿ ನಗರವಾದ ಅಶ್ಕೆಲೋನ್‌ನ ಮನೆಯೊಂದರಲ್ಲಿ ವೃದ್ಧರೊಬ್ಬರಿಗೆ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದರು.
ಸೌಮ್ಯ ಕಳೆದ ಏಳು ವರ್ಷಗಳಿಂದ ಇಸ್ರೇಲ್‌ನಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಕೇರಳದಲ್ಲಿರುವ ಪತಿ ಹಾಗೂ ಏಳು ವರ್ಷದ ಮಗನನ್ನು ಅಗಲಿದ್ದಾರೆ. ಉಗ್ರರು ನಿನ್ನೆ
ಸಂಜೆ ಸುಮಾರು 5.30 ರ ವೇಳೆಗೆ ನಡೆಸಿದ ದಾಳಿ ವೃದ್ಧೆಯ ಮನೆಗೆ ಅಪ್ಪಳಿಸಿತ್ತು. ಈ ವೇಳೆ 80 ವರ್ಷದ ವೃದ್ಧೆಯ ಆರೈಕೆ ಮಾಡುತ್ತಿದ್ದ ಕೇರಳ ಮೂಲದ ಸೌಮ್ಯಾ
ಸಾವನ್ನಪ್ಪಿದ್ದಾರೆ.
ಸೌಮ್ಯ ಸಾವಿನ ವಿಷಯವನ್ನು ಆಕೆಯ ನಾದಿನಿ ಖಚಿತ ಪಡಿಸಿದ್ದಾರೆ, ಅಲ್ಲಿನ ಸಮಯ ಸುಮಾರು 3.30ರ ವೇಳೆಗೆ ಘಟನೆ ಸಂಭವಿಸಿದೆ, ವಿಷಯ ತಿಳಿದ ನಾನು ಕೂಡಲೇ ಆಕೆ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದೆ, ಆಕೆ ಕೆಲಸ ಮಾಡುತ್ತಿದ್ದ ಇಡಿ ಕಟ್ಟಡ ದಾಳಿಯಿಂದ ನಾಶವಾಗಿತ್ತು ಎಂದು ಸೌಮ್ಯ ನಾದಿನಿ ಶೆರ್ಲಿ ಬನ್ನಿ ತಿಳಿಸಿದ್ದಾರೆ.
2017 ರಲ್ಲಿ ಭಾರತಕ್ಕೆ ಸೌಮ್ಯ ಬಂದಿದ್ದರು. ಭಾರತೀಯ ಸಮಯ ಸುಮಾರು 5 ಗಂಟೆಗೆ ಸೌಮ್ಯಾ ತಮ್ಮ ಕುಟುಂಬಸ್ಥರಿಗೆ ಕರೆ ಮಾಡಿದ್ದರು. ಅದಾದ ನಂತರ ಆಕೆ ಸಾವನ್ನಪ್ಪಿರುವ ವಿಷಯ ತಿಳಿಯಿತು.
ನಾವು ಡೀನ್ ಕುರಿಯಾಕೋಸ್ ಸಂಸದರ ಸಹಾಯದಿಂದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದೇವೆ ಮತ್ತು ಶವವನ್ನು ಮನೆಗೆ ತರಲು ವ್ಯವಸ್ಥೆ ಮಾಡಲಾಗುತ್ತಿದೆ "ಎಂದು ಸೌಮ್ಯಾ ಅವರ ಪತಿ ಸಂತೋಷ್ ಅವರ ಸಹೋದರ ಸಾಜಿ ಹೇಳಿದ್ದಾರೆ.
ಗಾಜಾ ಮೂಲದ ಉಗ್ರರು ಸೋಮವಾರ ಸಂಜೆಯಿಂದ ಇಸ್ರೇಲ್ ಮೇಲೆ ನೂರಾರು ರಾಕೆಟ್ ದಾಳಿ ನಡೆಸಿದ್ದು, ಮಂಗಳವಾರ ರಾತ್ರಿ 9 ಗಂಟೆಯ ವರೆಗೆ ದಾಳಿಯಲ್ಲಿ 32 ಮಂದಿ ಮೃತಪಟ್ಟಿದ್ದು, 220 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಹಮಾಸ್ ಹಾಗೂ ಇಸ್ಲಾಮಿಕ್ ಜಿಹಾದಿ ಉಗ್ರರ ನೆಲೆ ಮೇಲೆ ಇಸ್ರೇಲ್ ವಾಯುದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.