ನವದೆಹಲಿ: ದೇಶದಲ್ಲಿ ಕೇವಲ ಮೂರು ದಿನಗಳ ಅವಧಿಯಲ್ಲಿ ಶೇ. 32 ರಷ್ಟು ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಪ್ರಕರಣಗಳ ಏರಿಕೆಯೊಂದಿಗೆ ಸುಮಾರು 29 ಸಾವಿರಕ್ಕೂ ಹೆಚ್ಚು ಆಂಫೋಟೆರಿಸಿಯನ್ ಬಿ ಔಷಧವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.
ಪ್ರಮುಖ ಔಷಧದ ಸೀಮಿತ ಪೂರೈಕೆಯು ಮಾರಕ ರೋಗದ ವಿರುದ್ದಧ ಹೋರಾಟಕ್ಕೆ ತಡೆಯಾಗಿ ಪರಿಣಮಿಸಿದೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್-19 ಸೋಂಕಿತರು ಮತ್ತು ಇತ್ತೀಚಿಗೆ ಆ ಸೋಂಕಿನಿಂದ ಚೇತರಿಸಿಕೊಂಡವರಲ್ಲಿಯೇ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಕಾಯಿಲೆ ಕಂಡುಬರುತ್ತಿದೆ.
ಕೇಂದ್ರ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ, ಮಂಗಳವಾರ ರಾತ್ರಿಯವರೆಗೂ ದೇಶದಲ್ಲಿ 11,717 ರೋಗಿಗಳು ಈ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೇ 22 ರಂದು ಈ ರೋಗಿಗಳ ಸಂಖ್ಯೆ 8,848 ಇತ್ತು. ರಾಜ್ಯ ಸರ್ಕಾರಗಳು ನೀಡಿರುವ ಮಾಹಿತಿ ಪ್ರಕಾರ, ಬಹುತೇಕ ಕೇಸ್ ಗಳಲ್ಲಿ ಮೂಗು, ಕಣ್ಣು, ಮೆದುಳು, ಶ್ವಾಸಕೋಶದ ಮೇಲೆ ಪರಿಣಾಮ ಆಗುತ್ತಿರುವುದು ಕಂಡುಬಂದಿದೆ.
ಗುಜರಾತಿನಲ್ಲಿ 2859, ಮಹಾರಾಷ್ಟ್ರದಲ್ಲಿ 2770 ರೋಗಿಗಳಿದ್ದರೆ, ಆಂಧ್ರ ಪ್ರದೇಶದಲ್ಲಿ ಈವರೆಗೂ 768 ಕೇಸ್ ಗಳು ದಾಖಲಾಗಿವೆ. ಮಧ್ಯ ಪ್ರದೇಶದಲ್ಲಿ 752, ತೆಲಂಗಾಣದಲ್ಲಿ 744, ದೆಹಲಿಯಲ್ಲಿ 620 ಕೇಸ್ ಗಳು ದಾಖಲಾಗಿವೆ. 11 ರಾಜ್ಯಗಳಲ್ಲಿ ಈ ಕಾಯಿಲೆಯನ್ನು ಈಗಾಗಲೇ ಸಾಂಕ್ರಾಮಿಕ ಎಂದು ಘೋಷಿಸಲಾಗಿದ್ದು, ಕೇಂದ್ರ ಸರ್ಕಾರ ಕೂಡಾ ಸಾಂಕ್ರಾಮಿಕ ರೋಗ ಎಂದು ಪರಿಗಣಿಸಿದೆ.
ಈ ಮಧ್ಯೆ ಕಳೆದ ಕೆಲವು ವಾರಗಳಲ್ಲಿ ಬ್ಲ್ಯಾಕ್ ಫಂಗಸ್ ಕಾಯಿಲೆಗಾಗಿ ನೀಡುವ ಆಂಫೋಟೆರಿಸಿನ್ ಬಿ ಇಂಜೆಕ್ಷನ್ ಕೊರತೆಯಿರುವುದರಿಂದ ಸರ್ಜರಿಯಾದ ನಂತರವೂ ಚೇತರಿಸಿಕೊಳ್ಳಲು ಅನೇಕ ರೋಗಿಗಳು ಹೋರಾಡುವಂತಹ ಪರಿಸ್ಥಿತಿ ಎದುರಾಗಿದೆ. ಹೆಚ್ಚುವರಿಯಾಗಿ 29,250 ವಯಲ್ಸ್ ಆಂಫೋಟೆರಿಸಿನ್ -ಬಿ ಔಷಧವನ್ನು ರಾಜ್ಯಗಳಿಗೆ ಹಂಚಿಕೆ ಮಾಡಿರುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ. ವಿ. ಸದಾನಂದಗೌಡ ಇಂದು ಹೇಳಿದ್ದಾರೆ.
ಈ ಔಷದ ಉತ್ಪಾದನೆ ಮತ್ತು ಆಮದನ್ನು ಹೆಚ್ಚಿಸುವ ಮೂಲಕ ಈ ತಿಂಗಳೊಳಗೆ ಸುಮಾರು 5 ಲಕ್ಷ ವಯಲ್ಸ್ ಲಭ್ಯವಿರಲಿದೆ. ಈ ಔಷಧ ತಯಾರಿಸಲು ಐದು ಕಂಪನಿಗಳಿಗೆ ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಕಳೆದ ವಾರ ಹೇಳಿತ್ತು.