ಕಾಸರಗೋಡು: ಕಣ್ಣೂರು ಜಿಲ್ಲೆ ವಿಭಜನೆಗೊಂಡು ಕಾಸರಗೋಡು ಜಿಲ್ಲೆ ರಚನೆಯಾಗಿ ಮೇ 24ರಂದು 37ವರ್ಷ ಸಂದಿದ್ದು, ಕಾಸರಗೋಡಿನ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. 1984 ಮೇ 24ರಂದು ಹೊಸ ಜಿಲ್ಲೆಯ ಘೋಷಣೆಯಾಗಿದ್ದು, ಇದುವರೆಗೆ ಮೂಲ ಸೌಕರ್ಯ ವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬ ದೂರೂ ತೀವ್ರಗೊಂಡಿದೆ.
ಕಾಸರಗೋಡು ಜಿಲ್ಲೆಗೆ ಉನ್ನತ ವಿದ್ಯಾಭ್ಯಾಸ, ಉನ್ನತಮಟ್ಟದ ಚಿಕಿತ್ಸೆಗಿರುವ ಆಸ್ಪತ್ರೆ, ಕಾನೂನು ವಿದ್ಯಾಲಯ ಇಂದಿಗೂ ಮರೀಚಿಕೆಯಾಗಿದೆ. ಪ್ರಥಮ ಮುಖ್ಯ ಮಂತ್ರಿ ಇ.ಎಂ.ಎಸ್ ನಂಬೂದಿರಿ ಗೆಲುವು ಸಾಧಿಸಿದ್ದ ನೀಲೇಶ್ವರ ವಿಧಾನಸಭಾ ಕ್ಷೇತ್ರ, 1987ರಲ್ಲಿ ಮುಖ್ಯಮಂತ್ರಿ ಇ.ಕೆ ನಾಯನಾರ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ತೃಕ್ಕರಿಪುರ ಕ್ಷೇತ್ರವೂ ಕಾಸರಗೋಡು ಜಿಲ್ಲೆಯಲ್ಲಿ ಒಳಗೊಂಡಿದ್ದರೂ, ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳೇನೂ ಲಭಿಸಿಲ್ಲ. ಆ ನಂತರ ಎನ್.ಕೆ ಬಾಲಕೃಷ್ಣನ್, ಡಾ. ಎ.ಸುಬ್ಬರಾವ್, ಸಿ.ಟಿ ಅಹಮ್ಮದಾಲಿ, ಚೆರ್ಕಳಂ ಅಬ್ದುಲ್ಲ, ಇ.ಚಂದ್ರಶೇಖರನ್ ರಾಜ್ಯ ಸಚಿವರಾಗಿ, ಸಿಪಿಎಂನ ಮಹೋನ್ನತ ನೇತಾರ ಎ.ಕೆ.ಜಿ, ರಾಮಚಂದ್ರನ್ ಕಡನ್ನಪಳ್ಳಿ, ಐ.ರಾಮ ರೈ, ಎಂ.ರಾಮಣ್ಣ ರೈ, ಟಿ.ಗೋವಿಂದನ್, ಪಿ.ಕರುಣಾಕರನ್, ರಾಜ್‍ಮೋಹನ್ ಉಣ್ಣಿತ್ತಾನ್ ಸಂಸದರಾಗಿ ಆಯ್ಕೆಯಾದರೂ ಇಲ್ಲಿನ ಮೂಲಸೌಕರ್ಯ ವೃದ್ಧಿ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದೂರಗಾಮಿ ಕಾರ್ಯಯೋಜನೆ ರೂಪಿಸುವಲ್ಲಿ ವಿಫಲರಾಗಿರುವುದಾಗಿ ದೂರುಗಳಿವೆ.
ಜಿಲ್ಲೆಯ ಅಮಗ್ರ ಅಭಿವೃದ್ಧಿಗಾಗಿ ರೂಪುನೀಡಲಾದ ಡಾ. ಪ್ರಭಾಕರನ್ ಆಯೋಗ ವರದಿಯನ್ವಯ ಹನ್ನೊಂದು ಸಾವಿರ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದ್ದರೂ, 2013ರಿಂದ ಇದುವರೆಗೆ ಲಭಿಸಿದ ಮೊತ್ತ ಕೇವಲ 720 ಕೋಟಿ ರೂ. ಆಗಿದೆ. ಸುಸಜ್ಜಿತ ಆಸ್ಪತ್ರೆಯ ಕೊರತೆ ನೀಗಿಸಲು 2013 ನವೆಂಬರ್ ತಿಂಗಳಲ್ಲಿ ಶಿಲಾನ್ಯಾಸ ನಡೆಸಲಾದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಎಂಟು ವರ್ಷ ಸಮೀಪಿಸಿದರೂ ಕೆಲಸ ಪೂರ್ತಿಗೊಳಿಸಲಾಗದ ಸ್ಥಿತಿಯಿದೆ. ಜಿಲ್ಲೆಯ ಎಂಡೋ ಸಂತ್ರಸ್ತರ ಸಮಸ್ಯೆಗೂ ಸೂಕ್ತ ಪರಿಹಾರ ಕಂಡುಕೊಳ್ಳಲಾಗಿಲ್ಲ. ಉದ್ಯೋಗ ಸೃಷ್ಟಿಸುವ ಯಾವುದೇ ಯೋಜನೆ ಕಾಸರಗೋಡಿಗೆ ಬರುತ್ತಿಲ್ಲ. ಆರೋಗ್ಯ ವಲಯವೂ ಸಂದಿಗ್ಧಾವಸ್ಥೆಯಲ್ಲಿದೆ. ಉನ್ನತ ಚಿಕಿತ್ಸೆಗಾಗಿ ಗಡಿನಾಡ ಜನತೆ ನೆರೆಯ ದ.ಕ ಹಾಗೂ ಇತರ ಜಿಲ್ಲೆಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿಯಿದೆ. ಈ ಎಲ್ಲ ಗೊಂದಲದ ನಡುವೆ ಹದಿನೈದನೇ ವಿಧಾನಸಭೆಯ ಮೊದಲ ಅಧಿವೇಶನ ಆರಂಭಗೊಂಡು ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೇರಳದ ಅತ್ಯುತ್ತರದ ಮಂಜೇಶ್ವರದಿಂದ ಆಯ್ಕೆಯಾಗಿರುವ ಎ.ಕೆ.ಎಂ ಅಶ್ರಫ್ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಕನ್ನಡಿಗರಲ್ಲಿ ಭರವಸೆ ಮೂಡಿಸಿದ್ದರೂ, ಜಿಲ್ಲೆಯ ಅಭಿವೃದ್ಧಿಗಾಗಿ ಐದೂ ಮಂದಿ ಶಾಸಕರು ಒಟ್ಟಾಗಿ ದುಡಿಯಬೇಕಾದ ಅನಿವಾರ್ಯತೆಯಿದೆ.