ನವದೆಹಲಿ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ಕುರಿತಂತೆ ಕೇಂದ್ರ ಸರ್ಕಾರ ನೂತನ ಕೋವಿಡ್ ಲಸಿಕಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಕೋವಿಡ್ ಸೋಂಕಿಗೆ ತುತ್ತಾದ ವ್ಯಕ್ತಿ ಗುಣಮುಖರಾದ ಬಳಿಕ ಕನಿಷ್ಟ ಮೂರು ತಿಂಗಳ ಬಳಿಕ ಕೋವಿಡ್ ಲಸಿಕೆ ಪಡೆಯುವಂತೆ ಹೇಳಿದೆ.
ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡವರು ಮೂರು ತಿಂಗಳ ಬಳಿಕ ಲಸಿಕೆ ಹಾಕಿಸಿಕೊಳ್ಳುವುದು ಸೂಕ್ತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಈ ಕುರಿತಂತೆ ನೂತನ ಕೋವಿಡ್ ಲಸಿಕಾ ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಅದರಂತೆ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರು ಮೂರು ತಿಂಗಳ ಬಳಿಕ ಲಸಿಕೆ ಪಡೆಯುವುದು ಉತ್ತಮ ಎಂದು ಹೇಳಲಾಗಿದೆ. ಒಂದು ವೇಳೆ ಕೋವಿಡ್ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡ ಬಳಿಕ ಸೋಂಕು ತಗುಲಿದರೆ, ಅವರೂ ಸಹ ಸೋಂಕಿನಿಂದ ಚೇತರಿಸಿಕೊಂಡ ಮೂರು ತಿಂಗಳ ನಂತರ ಎರಡನೇ ಡೋಸ್ ಹಾಕಿಸಿಕೊಳ್ಳುವಂತೆ ಕೋವಿಡ್ ಲಸಿಕೆ ನಿರ್ವಹಣೆಯ ರಾಷ್ಟ್ರೀಯ ತಜ್ಞರ ತಂಡವು ಶಿಫಾರಸ್ಸು ಮಾಡಿದೆ.
ಕೋವಿಡ್ ಅಲ್ಲದೆ ಇತರೆ ಗಂಭೀರ ಕಾಯಿಲೆಗಳಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಅಥವಾ ಐಸಿಯುನಲ್ಲಿ ಇದ್ದರೆ, ಕೋವಿಡ್ ಲಸಿಕೆ ಹಾಕಿಸಿಕೊಳ್ಳುವುದನ್ನು ಕನಿಷ್ಠ 4ರಿಂದ 8 ವಾರಗಳ ವರೆಗೂ ಮುಂದೂಡುವುದು ಸೂಕ್ತ ಎಂದು ಹೇಳಲಾಗಿದೆ.
ಇದಲ್ಲದೇ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ವ್ಯಕ್ತಿ ಅಥವಾ ಕೋವಿಡ್‌ನಿಂದ ಗುಣಮುಖರಾಗಿ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವವರು 14 ದಿನಗಳ ನಂತರ ರಕ್ತದಾನ ಮಾಡಬಹುದಾಗಿದೆ. ಬಾಣಂತಿಯರು ಕೂಡ ಲಸಿಕೆ ಹಾಕಿಸಿಕೊಳ್ಳುವಂತೆ ಶಿಫಾರಸ್ಸು ಮಾಡಲಾಗಿದೆ. ಲಸಿಕೆ ಪಡೆಯುವ ಮೊದಲು ರಾಪಿಡ್ ಆಂಟಿಜೆನ್ ಪರೀಕ್ಷೆ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 20 ಲಕ್ಷ ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದು ಒಂದೇ ದಿನದಲ್ಲಿ ಗರಿಷ್ಠ ಕೋವಿಡ್ ಪರೀಕ್ಷಾ ಪ್ರಮಾಣವಾಗಿದ್ದು, ಜಾಗತಿಕ ದಾಖಲೆಯಾಗಿದೆ. ಅಂತೆಯೇ ದೇಶದ ದೈನಂದಿನ ಸೋಂಕು ಸಕಾರಾತ್ಮಕ ದರವು ಶೇ. 13.31 ಕ್ಕೆ ಇಳಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.