ನವದೆಹಲಿ: ಕೋವಿಡ್-19 3ನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದ್ದು, ಮಕ್ಕಳಿಗೆ ಸೋಂಕು ತಗುಲಬಹುದು, ಅವರಿಂದ ಇತರರಿಗೆ ವೇಗವಾಗಿ ಪ್ರಸರಣ ಕೂಡ ಆಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಕೋವಿಡ್-19 2ನೇ ಅಲೆಯಿಂದಾಗಿ ತತ್ತರಿಸಿ ಹೋಗಿರುವ ಭಾರತದಲ್ಲಿ ಇದೀಗ ಮಾರಕ ಸೋಂಕಿನ 3ನೇ ಅಲೆಯ ಭೀತಿ ಕಾಡುತ್ತಿದ್ದು, ಪ್ರಮುಖವಾಗಿ ಮಕ್ಕಳ ಆರೋಗ್ಯದ ಕುರಿತು ಪೋಷಕರಿಗೆ ಭಾರಿ ಚಿಂತೆ ಕಾಡುತ್ತಿದೆ. ಇದರ ನಡುವೆಯೇ ಕೇಂದ್ರ ಸರ್ಕಾರ ಮೂರನೇ ಅಲೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 3ನೇ ಅಲೆಯಿಂದ ಮಕ್ಕಳು ಸುರಕ್ಷಿತವಾಗಿಲ್ಲ. ಆದರೆ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಕೋವಿಡ್ ಸೋಂಕಿನ ಪರಿಣಾಮ ಕಡಿಮೆ ಇರುತ್ತದೆ ಎಂದು ನೀತಿ ಆಯೋಗ (ಆರೋಗ್ಯ)ದ ಸದಸ್ಯ ವಿಕೆ ಪಾಲ್ ಹೇಳಿದ್ದಾರೆ.
'ಮಕ್ಕಳಿಗೆ ಸೋಂಕು ತಗುಲಬಹುದು. ಅವರಿಂದ ಇತರರಿಗೆ ಪ್ರಸರಣ ಕೂಡ ಆಗಬಹುದು. ಅದರೆ ಮಕ್ಕಳಲ್ಲಿ ಸೋಂಕಿನ ಕನಿಷ್ಠ ಲಕ್ಷಣಗಳು ಕಂಡುಬರುತ್ತದೆ. ಸಾಮಾನ್ಯವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಬೀಳುವುದಿಲ್ಲ. ಮನೆಯಲ್ಲೇ ಅವರಿಗೆ ಚಿಕಿತ್ಸೆ ನೀಡಬಹುದು ಎಂದು ಪಾಲ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಿಯಂತ್ರಣದತ್ತ 2ನೇ ಅಲೆ:
ಪ್ರಸ್ತುತ ದೇಶದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್-19 2ನೇ ಅಲೆ ಕ್ರಮೇಣ ತಹಬದಿಗೆ ಬರುತ್ತಿದ್ದು, ಸಾಕಷ್ಟು ರಾಜ್ಯಗಳಲ್ಲಿ ಸೋಂಕಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ. ಸಾಕಷ್ಟು ಜಿಲ್ಲೆಗಳಲ್ಲಿ ದೈನಂದಿನ ಸೋಂಕು ಪ್ರಮಾಣ ಒಂದಂಕಿಗೆ ಕುಸಿದಿದೆ. ಸೋಂಕು ಸಕಾರಾತ್ಮಕ ದರ ಕೂಡ ಕ್ರಮೇಣ ಇಳಿಕೆಯಾಗುತ್ತಿದೆ. ಇದೀಗ ಎಲ್ಲ ಸರ್ಕಾರಗಳೂ ಮೂರನೇ ಅಲೆಯತ್ತ ಗಮನ ಕೇಂದ್ರೀಕರಿಸಬೇಕು. ಮೂರನೇ ಅಲೆ ಸಂಪೂರ್ಣವಾಗಿ ಮಕ್ಕಳ ಮೇಲೆ ಮಾತ್ರ ಪ್ರಭಾವ ಬೀರುತ್ತದೆ ಎಂದು ನಾವು ಭಾವಿಸಬಾರದು. ಕೋವಿಡ್ ನಿಯಮಾವಳಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಹೇಳಿದರು.