ನವದೆಹಲಿ : ಕೇರಳದಲ್ಲಿ ಈ ಬಾರಿ ಮುಂಗಾರು ಮಾರುತಗಳ ಪ್ರವೇಶ ಎರಡು ದಿನ ವಿಳಂಬವಾಗುವ ನಿರೀಕ್ಷೆಯಿದೆ. ಜೂನ್ 3ರ ವೇಳೆಗೆ ಮುಂಗಾರು ಕೇರಳವನ್ನು ಪ್ರವೇಶಿಸಬಹುದು ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಿಳಿಸಿದೆ.
ಐಎಂಡಿಯ ಪ್ರಧಾನ ನಿರ್ದೇಶಕ ಎಂ.ಮೊಹಾಪಾತ್ರ ಅವರು, ಕರ್ನಾಟಕದ ಕರಾವಳಿ ಭಾಗದಲ್ಲಿ ಸದ್ಯ ಜೋರು ಗಾಳಿಯ ಚಲನೆ ಇದೆ. ಇದರಿಂದಾಗಿ ನೈರುತ್ಯ ಮಾರುತಗಳ ಪ್ರವೇಶ ವಿಳಂಬವಾಗುತ್ತಿದೆ ಎಂದು ವಿವರಿಸಿದ್ದಾರೆ.
ಜೂನ್ 1ರಿಂದ ನೈರುತ್ಯ ಮಾರುತಗಳ ವೇಗ ತೀವ್ರಗೊಳ್ಳಬಹುದು. ಪರಿಣಾಮ ಕೇರಳದಲ್ಲಿ ಮಳೆಯಾಗಬಹುದು. ಈ ಕಾರಣದಿಂದ ಜೂನ್ 3ರ ವೇಳೆಗೆ ಮುಂಗಾರು ಕೇರಳವನ್ನು ಪ್ರವೇಶಿಸಬಹುದು ಎಂದು ಅಂದಾಜಿಸಲಾಗಿದೆ ಎಂದರು.
ನೈರುತ್ಯ ಮಾರುತಗಳು ತೀವ್ರಗೊಳ್ಳುತ್ತಿರುವ ಪರಿಣಾಮ ದೇಶದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಮುಂದಿನ ಐದು ದಿನ ಮಳೆ ಆಗುವ ಸಂಭವವಿದೆ. ಒಟ್ಟಾರೆ ಜೂನ್ 1 ರಿಂದ ನಾಲ್ಕು ತಿಂಗಳ ಮಳೆಗಾಲದ ಋತುವು ಆರಂಭವಾಗಲಿದೆ ಎಂದರು.
ಈ ಮೊದಲು ಮುಂಗಾರು ಮಾರುತವು ಕೇರಳವನ್ನು ಮೇ 31ರ ವೇಳೆಗೆ ಪ್ರವೇಶಿಸಬಹುದು ಎಂದು ಅಂದಾಜು ಮಾಡಲಾಗಿತ್ತು. ಈ ಹಂಗಾಮಿನಲ್ಲಿ ಮುಂಗಾರು ಮಳೆ ವಾಡಿಕೆಯಷ್ಟಿರುವ ನಿರೀಕ್ಷೆಯಿದೆ.