ಮಂಗಳೂರು: ದೇಶದಲ್ಲಿ ಕಾಡುತ್ತಿರುವ ಆಕ್ಸಿಜನ್ ಸಮಸ್ಯೆ ನೀಗಿಸಲು ವಿವಿಧ ರಾಷ್ಟ್ರಗಳು ಭಾರತಕ್ಕೆ ಸಹಾಯಹಸ್ತ ಚಾಚಿವೆ. ಬಹ್ರೇನ್ ದೇಶದಿಂದ ಮಂಗಳೂರಿಗೆ 40 ಮೆಟ್ರಿಕ್ ಟನ್ ಆಕ್ಸಿಜನ್ ಹಡಗಿನ ಮೂಲಕ ಬಂದಿದ್ದು, ನವಮಂಗಳೂರು ಬಂದರಿನಲ್ಲಿ ಆಕ್ಸಿಜನ್ ಅನ್ನು ಯಶಸ್ವಿಯಾಗಿ ಇಳಿಸಲಾಗಿದೆ.
ಬಹ್ರೇನ್ ಮತ್ತು ಭಾರತ ಸರ್ಕಾರದ ಒಪ್ಪಂದದಂತೆ 20 ಮೆಟ್ರಿಕ್ ಟನ್ ನ ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್‌ಗಳು ಮಂಗಳೂರಿಗೆ ಬಂದಿದೆ. ಭಾರತೀಯ ಕರಾವಳಿ ತಟ ರಕ್ಷಣಾ ಪಡೆಯ ಐಎನ್‌ಎಸ್ ತಲ್ವಾರ್ ಆಕ್ಸಿಜನ್ ಟ್ಯಾಂಕರ್‌ಗಳನ್ನು ಬಹ್ರೇನ್‌ನಿಂದ ತಂದಿದ್ದು, ನವಮಂಗಳೂರು ಬಂದರಿನ ಬೇರೆ ಎಲ್ಲಾ ಶಿಫ್ಟಿಂಗ್ ಕಾರ್ಯಗಳನ್ನು ಸ್ಥಗಿತಗೊಳಿಸಿ ಕ್ರೇನ್ ಮೂಲಕ ಟ್ಯಾಂಕರ್‌ಗಳನ್ನು ಕೆಳಗಿಳಿಸಿದರು.
ಇಡೀ ದಿನ ಎನ್‌ಎಂಪಿಟಿ ಬಳಿ ಸಮುದ್ರದಲ್ಲಿ ಹಡಗುಗಳು ಸಂಚರಿಸಿದಂತೆ ತಡೆ ಹೇರಲಾಗಿತ್ತು. ಬಹ್ರೇನ್‌ನ ಮನಾಮಾ ಬಂದರಿನಿಂದ ನೌಕೆ ಹೊರಟಿದ್ದು, ನೌಕೆಯಲ್ಲಿ ಕೊವೀಡ್ ಚಿಕಿತ್ಸೆಗೆ ಬಳಸುವ ಇತರ ವೈದ್ಯಕೀಯ ಉಪಕರಣಗಳನ್ನೂ ಹೊಂದಿದೆ.
ಬಹ್ರೇನ್‌ನಿಂದ ಬಂದ ಆಕ್ಸಿಜನ್ ನವಮಂಗಳೂರು ಬಂದರಿನಲ್ಲಿ ಶೇಖರಣೆ ಮಾಡಲಾಗಿದ್ದು, ಯಾವ ಜಿಲ್ಲೆಗೆ ಕಳುಹಿಸಬೇಕು ಎಂಬುವುದನ್ನು ರಾಜ್ಯ ಸರ್ಕಾರ ನಿರ್ಧಾರ ಮಾಡಲಿದೆ. ಸರ್ಕಾರದ ಸೂಚನೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲಾಡಳಿತ ಆಕ್ಸಿಜನ್ ಸರಬರಾಜು ಮಾಡಲಿದೆ.
ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಈಗಾಗಲೇ ನೂರಾರು ಸೋಂಕಿತರು ಮೃತಪಟ್ಟಿದ್ದು, ಹಲವು ರಾಷ್ಟ್ರಗಳು ಆಕ್ಸಿಜನ್ ನೆರವು ನೀಡಿದೆ. ಈಗಾಗಲೇ ಸೌದಿ ಆರೇಬಿಯಾ, ಯುಎಇ ಮತ್ತಿತರ ರಾಷ್ಟ್ರಗಳು ಈಗಾಗಲೇ ಆಕ್ಸಿಜನ್ ನೆರವು ನೀಡಿದ್ದು, ಈ ಹಿನ್ನಲೆಯಲ್ಲಿ ಬಹ್ರೇನ್ ಆಕ್ಸಿಜನ್ ನೆರವು ನೀಡಿದೆ.