ನವದೆಹಲಿ: ಏಪ್ರಿಲ್ 19ರಿಂದ ವಿವಿಧ ರಾಜ್ಯಗಳಿಗೆ 268 ಕ್ಕೂ ಹೆಚ್ಚು ಟ್ಯಾಂಕರ್ ಗಳಲ್ಲಿ ಸುಮಾರು 4,200 ಟನ್ ಲಿಕ್ವಿಡ್ ವೈದ್ಯಕೀಯ ಆಕ್ಸಿಜನ್ ಪೂರೈಸಲಾಗಿದೆ ಎಂದು ಭಾರತೀಯ ರೈಲ್ವೆ ಭಾನುವಾರ ತಿಳಿಸಿದೆ. ಈವರೆಗೂ 68 'ಆಕ್ಸಿಜನ್ ಎಕ್ಸ್ ಪ್ರೆಸ್' ರೈಲುಗಳು ತಮ್ಮ ಪ್ರಯಾಣವನ್ನು ಪೂರ್ಣಗೊಳಿಸಿರುವುದಾಗಿ ರೈಲ್ವೆ ಹೇಳಿದೆ.
ಈವರೆಗೆ ಮಹಾರಾಷ್ಟ್ರದಲ್ಲಿ 293, ಉತ್ತರ ಪ್ರದೇಶದಲ್ಲಿ 1230, ಮಧ್ಯಪ್ರದೇಶಕ್ಕೆ 271, ಹರಿಯಾಣಕ್ಕೆ 555, ತೆಲಂಗಾಣಕ್ಕೆ 123, ರಾಜಸ್ಥಾನಕ್ಕೆ 40 ಮತ್ತು ದೆಹಲಿಗೆ 1679 ಟನ್ ಧ್ರುವೀಕೃತ ಆಮ್ಲಜನಕವನ್ನು ರವಾನಿಸಲಾಗಿದೆ.ಭಾನುವಾರ ಕಾನ್ಪುರದಲ್ಲಿ 80 ಟನ್ ಆಕ್ಸಿಜನ್ ರವಾನಿಸಲಾಗಿದೆ. ಹೆಚ್ಚಿನ ಲೋಡೆಡ್ ಆಕ್ಸಿಜನ್ ಎಕ್ಸ್ ಪ್ರೆಸ್ ಗಳು ತಡರಾತ್ರಿ ಪ್ರಯಾಣವನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ರೈಲ್ವೆ ಮಾಹಿತಿ ನೀಡಿದೆ.
ಮಾರಕ ಕೋವಿಡ್ -19 ಎರಡನೇ ಅಲೆ ನಡುವೆ ದೇಶದಲ್ಲಿ ಜೀವ ರಕ್ಷಕ ಆಮ್ಲಜನಕದ ತೀವ್ರ ಕೊರತೆ ಎದುರಾಗುತ್ತಿದ್ದಂತೆ ಕಳೆದ ತಿಂಗಳಿನಿಂದ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳನ್ನು ಭಾರತೀಯ ರೈಲ್ವೆಯಿಂದ ಓಡಿಸಲಾಗುತ್ತಿದೆ.