ತಿರುವನಂತಪುರ; ಅರೆಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಕೇರಳದಾದ್ಯಂತ ಪ್ರಬಲ ಸುಂಟರಗಾಳಿ ಸೃಷ್ಟಿಗೊಂಡು ಮಳೆಗುಡುಗು ಸಿಡಿಲುಗಳಿಂದ ವ್ಯಾಪಕ ನಾಶನಷ್ಟಗಳು ವರದಿಯಾಗಿದೆ. ರಾಜ್ಯದಲ್ಲಿ ಮುಖ್ಯವಾಗಿ ವಿದ್ಯುತ್ ಸರಬರಾಜು ವ್ಯವಸ್ಥೆಗೆ ತೀವ್ರ ಹಾನಿಯನ್ನುಂಟುಮಾಡಿದೆ ಎಂದು ಕೆ.ಎಸ್.ಇ.ಬಿ ಹೇಳಿದೆ. ಅಧಿಕಾರಿಗಳ ಪ್ರಕಾರ, 38,93,863 ಗ್ರಾಹಕರು ವಿದ್ಯುತ್ ಕಡಿತದಿಂದ ತೊಂದರೆಗೊಳಗಾಗಿದ್ದು, ಕೆ.ಎಸ್.ಇ.ಬಿ ಗೆ ಸುಮಾರು 46.65 ಕೋಟಿ ರೂ.ನಷ್ಟ ಅಂದಾಜಿಸಲಾಗಿದೆ.
ಪ್ರಾಥಮಿಕ ವರದಿಯ ಪ್ರಕಾರ, ರಾಜ್ಯಾದ್ಯಂತ 23,417 ವಿತರಣಾ ಟ್ರಾನ್ಸ್ ಫಾರ್ಮರ್ ಗಳು ಹಾನಿಗೊಳಗಾಗಿವೆ. 68 ಪೂರೈಕೆ ಟ್ರಾನ್ಸ್‍ಫಾರ್ಮರ್‍ಗಳು ಹಾನಿಗೊಳಗಾದವು. 710 ಹೈ ಟೆನ್ಷನ್ ಕಂಬಗಳು ಮತ್ತು 4763 ಲೋ ಟೆನ್ಷನ್ ಕಂಬಗಳು ಧರಾಶಾಯಿಯಾಗಿವೆ. ಹೈ ವೋಲ್ಟೇಜ್ ವಿದ್ಯುತ್ ತಂತಿಗಳ ಛಿದ್ರಗೊಂಡ 615 ಪ್ರಕರಣಗಳು ಮತ್ತು ಕಡಿಮೆ ಒತ್ತಡದ ರೇಖೆಯ ಛಿದ್ರಗೊಂಡ 17,959 ಪ್ರಕರಣಗಳು ವರದಿಯಾಗಿವೆ.
ಕೊಲ್ಲಂ, ಆಲಪ್ಪುಳ ಮತ್ತು ತಿರುವನಂತಪುರ Uಳು ಹೆಚ್ಚು ಹಾನಿಗೊಳಗಾದ ಜಿಲ್ಲೆಗಳು. ಕೊಲ್ಲಂ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಕೆಡವಲ್ಪಟ್ಟಿವೆ. 7,29,888 ಗ್ರಾಹಕರು ಸಂಪರ್ಕ ಕಡಿತಗೊಂಡಿರುವರು. ಆಲಪ್ಪುಳ ಜಿಲ್ಲೆಯಲ್ಲಿ 600 ಕ್ಕೂ ಹೆಚ್ಚು ಕಂಬಗಳು ಹಾನಿಗೊಂಡಿವೆ. 5,83,216 ಗ್ರಾಹಕರು ವಿದ್ಯುತ್ ಇಲ್ಲದೆ ಸಂಕಷ್ಟಕ್ಕೊಳಗಾಗಿರುವರು. ತಿರುವನಂತಪುರ ಜಿಲ್ಲೆಯಲ್ಲಿ 950 ಕ್ಕೂ ಹೆಚ್ಚು ಕಂಬಗಳು ಹಾನಿಗೊಂಡಿವೆ. 6,49,139 ಮಂದಿ ಗ್ರಾಹಕರಿಗೆ ವಿದ್ಯುತ್ ಕಡಿತ ಉಂಟಾಗಿದೆ.
ಕೊರೋನಾ ಚಿಕಿತ್ಸಾ ಕೇಂದ್ರಗಳು, ಆಮ್ಲಜನಕ ಸ್ಥಾವರಗಳು ಮತ್ತು ಲಸಿಕೆ ಶೇಖರಣಾ ಸೌಲಭ್ಯಗಳಿಗೆ ಸಮರೋಪಾದಿಯ ನೆಲೆಯಂತೆ ವಿದ್ಯುತ್ ಪುನಃಸ್ಥಾಪಿಸಲಾಗಿದೆ ಎಂದು ಕೆಎಸ್‍ಇಬಿ ಹೇಳಿದೆ. ಪೂರೈಕೆ ಟ್ರಾನ್ಸ್‍ಫಾರ್ಮರ್‍ಗಳು, ಎಚ್ ಟಿ ಲೈನ್‍ಗಳು, ಎಲ್ ಟಿ ಲೈನ್‍ಗಳು ಮತ್ತು ವೈಯಕ್ತಿಕ ದೂರುಗಳಂತಹ ಆದ್ಯತೆಯ ಕ್ರಮದಲ್ಲಿ ಹೆಚ್ಚಿನ ದೋಷಗಳನ್ನು ಸರಿಪಡಿಸಲಾಗಿದೆ. ಉಳಿದ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಶ್ರಮಿಸುತ್ತಿದೆ ಎಂದು ಕೆ.ಎಸ್.ಇ.ಬಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇನ್ನೂ ವಿದ್ಯುತ್ ಕಡಿತ ಮುಂದುವರಿದಿದೆ.