ನವದೆಹಲಿ: ಬ್ರಿಟನ್ ಗೆ ರಫ್ತಾಗಬೇಕಿದ್ದ 50 ಲಕ್ಷ ಡೋಸ್ ಕೋವಿಡ್ ಲಸಿಕೆಯನ್ನು ಭಾರತದಲ್ಲೇ ಬಳಕೆ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಿದ್ದು, ಇದರಿಂದ ಭಾರತ ಸರ್ಕಾರದ 18 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಯೋಜನೆಗೆ ಬೆಂಬಲ ಲಭಿಸಿದಂತಾಗಿದೆ.
ಹೌದು.. ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಲಸಿಕೆಗೆ ಭಾರಿ ಬೇಡಿಕೆ ಹೆಚ್ಚಾಗಿದೆ. ಅಂತೆಯೇ ಲಸಿಕೆ ಕೊರತೆಯಿಂದಾಗಿ ಸಾಕಷ್ಟು ರಾಜ್ಯಗಳಲ್ಲಿ ಲಸಿಕೆ ಅಭಿಯಾನ ತಡವಾಗುತ್ತಿದೆ. ಈ ಎಲ್ಲ ಸಂಗತಿಗಳ ನಡುವೆಯೇ ಭಾರತಕ್ಕೆ ಆಶಾದಾಯಕ ಸುದ್ದಿಯೊಂದು ಹೊರಬಿದ್ದಿದ್ದು, ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್)ಗೆ ರಫ್ತು ಮಾಡಲು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ್ದ ಸುಮಾರು ಐವತ್ತು ಲಕ್ಷ ಡೋಸ್ 'ಕೋವಿಶೀಲ್ಡ್' ಲಸಿಕೆಗಳನ್ನು ಈಗ ಭಾರತದಲ್ಲೇ ಬಳಕೆ ಮಾಡಿಕೊಳ್ಳಲು ಅನುಮತಿ ಲಭ್ಯವಾಗಿದೆ. ಅದರಂತೆ ಭಾರತದ 21 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 18 ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಬೆಂಬಲ ದೊರತಂತಾಗಿದೆ.
ಪುಣೆ ಮೂಲದ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸರ್ಕಾರಿ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಅನುಮತಿ ಕೋರಿ ಪತ್ರ ಬರೆದ ನಂತರ ಲಸಿಕೆಗಳನ್ನು ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡುವ ಕುರಿತು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಿಂದೆ ಅಸ್ಟ್ರಾಜೆನೆಕಾ ಜೊತೆಗಿನ ಒಪ್ಪಂದವನ್ನು ಉಲ್ಲೇಖಿಸಿ, ಸೆರಮ್ ಸಂಸ್ಥೆ ಮಾರ್ಚ್ 23 ರಂದು ಬ್ರಿಟನ್ ಗೆ 50 ಲಕ್ಷ ಡೋಸ್ ಕೋವಿಶೀಲ್ಡ್ ಸರಬರಾಜು ಮಾಡಲು ಸಚಿವಾಲಯದಿಂದ ಅನುಮತಿ ಕೋರಿತ್ತು, ಆದರೆ ಭಾರತ ಸರ್ಕಾರ ರಫ್ತಿನಿಂದಾಗಿ ಭಾರತದ ಲಸಿಕೆ ಅಭಿಯಾನಕ್ಕೆ ತೊಂದರೆಯಾಗುವುದಿಲ್ಲ ಎಂಬ ಭರವಸೆ ಮೇರೆಗೆ ಅನುಮತಿ ನೀಡಿತ್ತು.
ಇದೀಗ ಇದೇ ಲಸಿಕೆಗಳನ್ನು ಭಾರತದಲ್ಲೇ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಬ್ರಿಟನ್ ಗೆ ರವಾನಿಸಬೇಕಿದ್ದ ಈ ಲಸಿಕೆಗಳ ಲೇಬಲ್ ಕೋವಿಶೀಲ್ಡ್ ಎಂದು ಇಲ್ಲ.. ಬದಲಿಗೆ ಆಸ್ಟ್ರಾಜೆನೆಕಾ ಕೋವಿಡ್ ಲಸಿಕೆ ಎಂದು ನಮೂದಾಗಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 18ರಿಂದ 44 ವಯಸ್ಸಿನ ಜನರಿಗೆ ಲಸಿಕೆ ನೀಡಲು ಕೋವಿಶೀಲ್ಡ್ ಲಸಿಕೆಯ 50 ಲಕ್ಷ ಡೋಸ್ ಸಂಗ್ರಹ ಈಗ ಲಭ್ಯವಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಹಿಂದೆ ಲಸಿಕೆ ಅಭಿಯಾನದ ನಿಮಿತ್ತ ಕೆಲವು ರಾಜ್ಯಗಳಿಗೆ ತಲಾ 3,50,000 ಡೋಸ್ ಲಸಿಗೆಳನ್ನು ಹಂಚಲಾಗಿದ್ದರೆ, ಇತರೆ ರಾಜ್ಯಗಳಿಗೆ ತಲಾ 1,00,000 ಡೋಸ್‌ಗಳನ್ನು ನೀಡಲಾಗಿದೆ, ಆಯಾ ರಾಜ್ಯಗಳ ಸೋಂಕು ಪ್ರಮಾಣಕ್ಕೆ ಅನುಸಾರವಾಗಿ ತಲಾ 50,000 ಡೋಸ್‌ಗಳನ್ನು ನಿಗದಿಪಡಿಸಲಾಗಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಸ್ವೀಡಿಷ್-ಬ್ರಿಟಿಷ್ ಫಾರ್ಮಾ ಪ್ರಮುಖ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತಯಾರಿಸುತ್ತಿದೆ.