ಮುಂಬೈ: ಮಹಾಮಾರಿ ಕೋವಿಡ್ ಸಾಂಕ್ರಾಮಿಕ ಅಟ್ಟಹಾಸ ತೀವ್ರಗೊಂಡಿರುವ ನಡುವೆಯೇ ಬ್ಲ್ಯಾಕ್ ಫಂಗಸ್ ಹಾವಳಿ ಉಲ್ಬಣಗೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ ಹೊಸ ರೋಗದ 52 ಮಂದಿ ಬಲಿಯಾಗಿದ್ದಾರೆ.
ಹೆಚ್ಚು ಕಾಲ ಆಸ್ಪತ್ರೆಗಳಲ್ಲಿ ಉಳಿಯುವ ಕೋವಿಡ್ ಸೋಂಕಿತರು ಹಾಗೂ ಸೋಂಕಿನಿಂದ ಗುಣಮುಖರಾಗಿ ಮಲೀನ ಪರಿಸರದಲ್ಲಿ ವಾಸ ಮಾಡುವ ದುರ್ಬಲ ಕಾಯರಿಗೆ ಫಂಗಸ್ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮಹಾರಾಷ್ಟ್ರದಲ್ಲಿ ಇಂತಹ ಪ್ರಕರಣಗಳು ಇತ್ತೀಚೆಗೆ ಉಲ್ಬಣಿಸಿದ್ದು, ಈ ವರೆಗೂ 52 ಮಂದಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಕೊರೋನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ರೋಗಿಗಳಲ್ಲಿ ಅತೀವ್ರ ಜ್ವರ, ಕಣ್ಣಿನ ನೋವು, ಮೂಗು ಕಟ್ಟುವುದು, ಕಣ್ಣಿನ ದೃಷ್ಠಿ ಭಾಗಶಃ ನಷ್ಟಗೊಂಡಿರುವ ಲಕ್ಷಣಗಳು ಕಂಡುಬಂದಿವೆ.
ಪ್ರಸ್ತುತ ಸಾವನ್ನಪ್ಪಿರುವ ಈ 52 ಮಂದಿಯೂ ಕೊರೋನಾ ಸೋಂಕಿಗೊಳಗಾಗಿ ಚೇತರಿಸಿಕೊಂಡವರೇ ಆಗಿದ್ದರೆಂದು ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಇದೇ ಮೊದಲ ಬಾರಿಗೆ ಮಹಾರಾಷ್ಟ್ರ ಆರೋಗ್ಯ ಸಚಿವಾರ ಬ್ಲ್ಯಾಕ್ ಫಂಗಸ್ ನಿಂದ ಸಾವನ್ನಪ್ಪಿದ್ದವರ ಕುರಿತಂತೆಯು ಪ್ರತ್ಯೇಕವಾಗಿ ಮಾಹಿತಿ ನೀಡಲು ಆರಂಭಿಸಿದೆ.
ಬುಧವಾರವಷ್ಟೇ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆಯವರು, ರಾಜ್ಯದಲ್ಲಿ ಈ ವರೆಗಲೂ 1,500 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಕೊರೋನಾ 2ನೇ ಅಲೆ ವೇಳೆ ತೀವ್ರಗೊಂಡಿದೆ ಎಂದು ಹೇಳಿದ್ದಾರೆ.
ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಗುಲಿದವರ ಚಿಕಿತ್ಸೆಗೆ ಬಹುಶಿಸ್ತೀಯ ವಿಧಾನದ ಅಗತ್ಯವಿರುತ್ತದೆ, ಇದರಿಂದ ಆರೋಗ್ಯದ ಮೂಲಸೌಕರ್ಯಗಳ ಮೇಲೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆಗಳಿವೆ.
ಪರಿಸ್ಥಿತಿ ನಿಭಾಯಿಸಲು ಈಗಾಗಲೇ 1 ಲಕ್ಷ ಡೋಸ್ ಗಳ ಆಂಫೊಟೆರಿಸಿನ್ ಬಿ ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ದೀರ್ಘಕಾಲಿಕ ರೋಗದಿಂದ ಬಳಲುತ್ತಿರುವವರ ಮೇಲೆ ಈದು ಅತ್ಯಂತ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತೋಪೆ ತಿಳಿಸಿದ್ದಾರೆ.