ಕಾಸರಗೋಡು: ಕಾಸರಗೋಡು ಜಿಲ್ಲೆಯ 5 ಆರೋಗ್ಯ ಸಂಸ್ಥೆಗಳಲ್ಲಿ ನೂತನ ಬ್ಲಾಕ್ ನಿರ್ಮಾಣಕ್ಕೆ ಆಡಳಿತೆ ಅನುಮತಿ ನೀಡಲಾಗಿದೆ.
ಕಾಸರಗೋಡು ಜಿಲ್ಲೆಯ ಆರೋಗ್ಯ ಸಂಸ್ಥೆಗಳನ್ನು ಆದ್ರರ್ಂ ಯೋಜನೆಯ ಗುಣಮಟ್ಟಕ್ಕೆ ಏರಿಸುವ ಅಂಗವಾಗಿ ಅಂಗಡಿಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರ, ಮೌಕೋಡು, ಉದುಮಾ, ಮಡಿಕೈ, ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಈ ರೀತಿ ನೂತನ ಬ್ಲಾಕ್ ಗಳನ್ನು ನಿರ್ಮಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಆಡಳಿತೆ ಮಂಜೂರಾತಿ ಲಭಿಸಿದೆ.
ಹೊರರೋಗಿ ಕೊಠಡಿಗಳು, ನಿಗಾ ಕೊಠಡಿಗಳು, ದಂತ ಹೊರರೋಗಿ ವಿಭಾಗಗಳು, ವಿಶೇಷ ಹೊರರೋಗಿ ವಿಭಾಗಗಳು, ಹೊರರೋಗಿ ನೋಂದಣಿ ಕೊಠಡಿಗಳು, ಡ್ರೆಸ್ಸಿಂಗ್ ರೂಂ, ಪ್ರಯೋಗಾಲಯ, ಮಕ್ಕಳಿಗೆ ಎದೆ ಹಾಲು ಉಣಿಸುವ ಕೊಠಡಿ ಇತ್ಯಾದಿ ನೂತನ ಬ್ಲೋಕ್ ನಲ್ಲಿ ಸಜ್ಜುಗೊಳಿಸಲಾಗುವುದು. ಸಾರ್ವಜನಿಕರನ್ನು ಹೊರರೋಗಿ ವಿಭಾಗಕ್ಕೆ ಆಗಮಿಸುವ ರೋಗಿಗಳಿಂದ ವಿಂಗಡಿಸುವ ನಿಟ್ಟಿನಲ್ಲಿ ಕಟ್ಟಡದ ಮೊದಲ ಅಂತಸ್ತಿನಲ್ಲಿ ಸಾರ್ವಜನಿಕ ಆರೋಗ್ಯ ವಿಭಾಗ ವ್ಯವಸ್ಥೆ ಸಜ್ಜುಗೊಳ್ಳಲಿದೆ.
ಪುತ್ತಿಗೆ ಗ್ರಾಮ ಪಂಚಾಯತ್ ನ ಅಂಗಡಿಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 85 ಲಕ್ಷ ರೂ., ವೆಸ್ಟ್ ಏಳೇರಿ ಗ್ರಾಮ ಪಂಚಾಯತ್ ನ ಮೌಕೋಡು ಕುಟುಂಬ ಆರೋಗ್ಯ ಕೇಂದ್ರಕ್ಕೆ 75 ಲಕ್ಷ ರೂ., ಮಡಿಕೈ ಕುಟುಂಬ ಆರೋಗ್ಯ ಕೇಂದ್ರಕ್ಕೆ 3.30 ಕೋಟಿ ರೂ., ಉದುಮಾ ಕುಟುಂಬ ಆರೋಗ್ಯ ಕೇಂದ್ರಕ್ಕೆ ಒಂದು ಕೋಟಿ ರೂ., ಎಣ್ಣಪ್ಪಾರ ಕುಟುಂಬ ಆರೋಗ್ಯ ಕೇಂದ್ರಕ್ಕೆ 1.80 ಕೋಟಿ ರೂ. ಮೀಸಲಿರಿಸಲಾಗಿದೆ.
ಅಂಗಡಿಮೊಗರು ಮತ್ತು ಎಣ್ಣಪ್ಪಾರದಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಇಂಜಿನಿಯರ್ ಯೋಜನೆ ಜಾರಿಗೊಳಿಸುವರು. ಮೌಕೋಡು, ಮಡಿಕೈ, ಉದುಮಾಗಳಲ್ಲಿ ಎಲ್.ಐ.ಡಿ. ಆಂಡ್ ಇ.ಡಬ್ಲ್ಯೂ. ವಿಭಾಗ ಕಾರ್ಯಕಾರಿ ಇಂಜಿನಿಯರ್ ಅವರ ಮೇಲ್ನೋಟದಲ್ಲಿ ಯೋಜನೆ ಜಾರಿಗೊಳ್ಳಲಿದೆ.
ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಕಾಸರಗೋಡು ಜಿಲ್ಲಾ ಮಟ್ಟದ ಸಭೆಯಲ್ಲಿ ಆಡಳಿತೆ ಮಂಜೂರಾತಿ ನೀಡಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದರು.