ಮಾಂಡ್ಲ: ಮಧ್ಯಪ್ರದೇಶದ ಮಾಂಡ್ಲ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ 29 ವರ್ಷದ ಮಹಿಳೆಯೊಬ್ಬರು 5.1 ಕೆಜಿ ತೂಕದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ಭಾನುವಾರ ತಿಳಿಸಿದ್ದಾರೆ.
ನವಜಾತ ಶಿಶುವಿನ ಸಾಮಾನ್ಯ ತೂಕವು 2.5 ಕೆಜಿಯಿಂದ 3.7 ಕೆಜಿವರೆಗೆ ಇರುತ್ತದೆ. ಆದ್ದರಿಂದ ಇದು ಅಪರೂಪದ ಪ್ರಕರಣವಾಗಿದೆ ಎಂದು ಡಾ.ಅಜಯ್ ತೋಶ್ ಮರಾವಿ ಹೇಳಿದ್ದಾರೆ.
'ರಕ್ಷಾ ಕುಶ್ವಾಹ ಎಂಬುವವರಿಗೆ ಅಂಜನಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾಮಾನ್ಯ ಹೆರಿಗೆ ಮಾಡಿಸಲಾಗಿದ್ದು, ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ತೂಕ 5.1 ಕೆಜಿ, 54 ಸೆಂಟಿಮೀಟರ್ ಉದ್ದ ಇದ್ದು, ನವಜಾತ ಶಿಶುವಿನ ಸರಾಸರಿ ತೂಕದ ದೃಷ್ಟಿಯಿಂದ ಇದು ಅಪರೂಪ ಪ್ರಕರಣ' ಎಂದಿದ್ದಾರೆ.
'ಮಧುಮೇಹ, ಬೊಜ್ಜು ಮತ್ತು ಹಾರ್ಮೋನುಗಳ ಸಮಸ್ಯೆಯಿರುವ ಮಹಿಳೆಯರು ಅಧಿಕ ತೂಕದ ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ, ಕುಶ್ವಾಹ ಅವರಿಗೆ ಮಧುಮೇಹವಿಲ್ಲ' ಎಂದು ಡಾ.ಮರಾವಿ ಹೇಳಿದ್ದಾರೆ.
ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.