ನವದೆಹಲಿ: ಕಳೆದ ವಾರವಷ್ಟೆ ಸರ್ಕಾರ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಿತ್ತು. ಇದೀಗ ಆರು ತಿಂಗಳ ಒಳಗೆ ಕೋವಿಶೀಲ್ಡ್‌ನ ಎರಡನೇ ಡೋಸ್ ಲಸಿಕೆ ಪಡೆದುಕೊಂಡರೂ ಅದು ಪರಿಣಾಮಕಾರಿಯಾಗಿರುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಈ ಹಿಂದೆ ಎರಡು ಡೋಸ್ ಲಸಿಕೆಯ ನಡುವೆ ಎಂಟು ವಾರಗಳ ಅಂತರವಿರಬೇಕೆಂದು ತಿಳಿಸಲಾಗಿತ್ತು. ನಂತರ ರಾಷ್ಟ್ರೀಯ ತಾಂತ್ರಿಕ ಸಮಿತಿ ತಂಡದ ಶಿಫಾರಸಿನ ಮೇರೆಗೆ ಈ ಅಂತರವನ್ನು 12-16 ವಾರಗಳಿಗೆ ವಿಸ್ತರಿಸಲಾಯಿತು.
ಆದರೆ ಬ್ರಿಟನ್‌ನಲ್ಲಿ B.1.617 ಕೊರೊನಾ ರೂಪಾಂತರ ಸೋಂಕಿನ ಪ್ರಮಾಣ ಹೆಚ್ಚಾದಂತೆ ಬ್ರಿಟನ್ ಸರ್ಕಾರ ಎರಡು ಡೋಸ್‌ಗಳ ನಡುವಿನ ಅಂತರವನ್ನು 12 ರಿಂದ 8 ವಾರಗಳಿಗೆ ಸೋಮವಾರವಷ್ಟೆ ಇಳಿಸಿದೆ.
ಈ ನಡುವೆ ಭಾರತದಲ್ಲಿ ಲಸಿಕೆಗಳ ಅಭಾವವೂ ತೀವ್ರವಾಗಿದ್ದು, ಈ ಕಾರಣಕ್ಕೆ ಲಸಿಕೆಯ ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಲಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಮೊದಲ ಡೋಸ್ ಲಸಿಕೆ ಪಡೆದು ನಾಲ್ಕು ವಾರದ ನಂತರ, ಆರು ತಿಂಗಳ ಒಳಗೆ ಯಾವಾಗ ಬೇಕಾದರೂ ಲಸಿಕೆ ಪಡೆದುಕೊಳ್ಳಬಹುದು ಎಂದು ಕೆಲವು ತಜ್ಞರು ಹೇಳಿದ್ದಾರೆ.
ಲಸಿಕೆಗಳನ್ನು ಯಾವಾಗ ಪಡೆದುಕೊಂಡರೂ ತೊಂದರೆಯಿಲ್ಲ. ಆದರೆ ಮೊದಲ ಡೋಸ್ ಪಡೆದ ತಿಂಗಳ ಒಳಗೆ ಎರಡನೇ ಡೋಸ್ ಪಡೆದುಕೊಂಡರೆ ಅದರ ಪರಿಣಾಮ ಕಡಿಮೆಯಿರುತ್ತದೆ ಎಂದು ಅವರು ಹೇಳಿದ್ದಾರೆ.
12-16 ವಾರಗಳ ಅಂತರದಲ್ಲಿ ಲಸಿಕೆ ನೀಡಿದರೂ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಯಾವುದೇ ಅನುಮಾನವಿಲ್ಲ ಎಂದಾದರೆ ಆಗಲೇ ಲಸಿಕೆ ನೀಡುವುದರಲ್ಲಿಯೂ ತೊಂದರೆಯಿಲ್ಲ ಎಂದು ಹೇಳಿದ್ದಾರೆ.