ನವದೆಹಲಿ: ಕೋವಿಡ್ ಸೋಂಕಿಗೆ ತುತ್ತಾದವರು ಚೇತರಿಸಿಕೊಂಡ ಆರು ತಿಂಗಳ ಬಳಿಕ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಸರ್ಕಾರಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ. ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ಅಂತರವನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಬೇಕು ಎಂದು ಅದೇ ಸಮಿತಿ ಹೇಳಿದೆ ಎಂದು ತಿಳಿಸಿದೆ.
ಆದರೆ, ಕೊವ್ಯಾಕ್ಸಿನ್ ಲಸಿಕೆಯ ಡೋಸ್‌ಗಳ ನಡುವಿನ ಅಂತರ ಬದಲಾವಣೆಗೆ ಯಾವುದೇ ಶಿಫರಸು ಮಾಡಲಾಗಿಲ್ಲ.
ಈ ಶಿಫಾರಸುಗಳನ್ನು ಇತ್ತೀಚೆಗೆ ಸಭೆ ನಡೆಸಿದ ಇಮ್ಯುನೈಸೇಶನ್ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ(ಎನ್‌ಟಿಎಜಿಐ) ಮಾಡಿದೆ.
ಲಸಿಕೆಯ ಮೊದಲ ಡೋಸ್ ಪಡೆದವರು ಎರಡನೇ ಡೋಸ್ ಪಡೆಯುವುದಕ್ಕೂ ಮುನ್ನ ಕೋವಿಡ್ ಪಾಸಿಟಿವ್ ಕಂಡುಬಂದರೆ ಚೇತರಿಸಿಕೊಂಡ ನಂತರ ನಾಲ್ಕರಿಂದ ಎಂಟು ವಾರಗಳವರೆಗೆ ಕಾಯಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಜೊತೆಗೆ, ಪ್ಲಾಸ್ಮಾ ಚಿಕಿತ್ಸೆ ಪಡೆದ ಕೋವಿಡ್ ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ದಿನದಿಂದ ಮೂರು ತಿಂಗಳವರೆಗೆ ಲಸಿಕೆ ಪಡೆಯಬಾರದು ಎಂದು ಹೇಳಿದೆ.
ಆಸ್ಪತ್ರೆಗೆ ದಾಖಲು ಅಥವಾ ಐಸಿಯು ಆರೈಕೆಯ ಅಗತ್ಯವಿರುವ ಯಾವುದೇ ಗಂಭೀರ ಕಾಯಿಲೆ ಇರುವವರು ಲಸಿಕೆ ಪಡೆಯಲು ಮೊದಲು ನಾಲ್ಕರಿಂದ ಎಂಟು ವಾರಗಳವರೆಗೆ ಕಾಯಬೇಕು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಸ್ತುತ ಇರುವ ಪ್ರೋಟೊಕಾಲ್ ಪ್ರಕಾರ, ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ನಂತರ ನಾಲ್ಕರಿಂದ ಎಂಟು ವಾರಗಳ ಬಳಿಕ ಲಸಿಕೆ ತೆಗೆದುಕೊಳ್ಳಬೇಕು. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ನೀಡಬಾರದು.