ತಿರುವನಂತಪುರ: ಸಾಮಾಜಿಕ ಅಂತರ ಸಹಿತ ಕೋವಿಡ್ ಮಾನದಂಡಗಳಿಗೆ ಅನುಸಾರವಾಗಿ ಬೆಳಿಗ್ಗೆ 5 ರಿಂದ ಏಳು ಗಂಟೆಯ ವರೆಗೆ ಮತ್ತು ಸಂಜೆ 7 ರಿಂದ ಒಂಭತ್ತು ಗಂಟೆಯ ವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ನಡಿಗೆಗೆ(ವಾಕಿಂಗ್) ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಲೇಖನ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯಲು ಅನುಮತಿಸಲಾಗುವುದಿಲ್ಲ. ಬಟ್ಟೆ, ಪಾದರಕ್ಷೆಗಳು ಮತ್ತು ಆಭರಣ ಮಳಿಗೆಗಳಲ್ಲಿ ತಮ್ಮ ವಿವಾಹ ಆಮಂತ್ರಣ ಪತ್ರಿಕೆ ತೋರಿಸಿ ಅಂಗಡಿಗಳಿಗೆ ಪ್ರವೇಶಿಸಲು ಸಾರ್ವಜನಿಕರಿಗೆ ಅವಕಾಶವಿದೆ. ಇತರ ವ್ಯಾಪಾರ ಘಟಕಗಳಿಗೆ ಉತ್ಪನ್ನಗಳ ಮನೆ-ಮನೆ ವಿತರಣೆಗೆ ಮಾತ್ರ ಅನುಮತಿಸಲಾಗಿದೆ. ಇಂದು ಸಂಜೆ ನಡೆದ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಕೋವಿಡ್ ವಿನಾಯಿತಿಗಳನ್ನು ದುರುಪಯೋಗಪಡಿಸಿಕೊಂಡವರನ್ನು Pಟುವಾಗಿ ಟೀಕಿಸಿದ್ದು, ನಿಬಂಧನೆಗಳನ್ನು ಸ್ಪಷ್ಟವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಲಾಕ್ ಡೌನ್ ನಿಂದ ವಿನಾಯ್ತಿ ನೀಡಲಾಗಿರುವ ಸರ್ಕಾರಿ ನೌಕರರು, ವಿಧಾನಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸರ್ಕಾರಿ ನೌಕರರು ಮತ್ತು ಪರೀಕ್ಷೆಗಳನ್ನು ನಡೆಸಬೇಕಾದ ನೌಕರರು ಕಚೇರಿಯಲ್ಲಿ ಹಾಜರಿರಬೇಕು. ಜೂನ್ 7, ರಿಂದ, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಕಂಪನಿಗಳು ಸೇರಿದಂತೆ ಎಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಶೇ. 50 ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು.
ಪ್ರಸ್ತುತ, ಕೈಗಾರಿಕಾ ಸಂಸ್ಥೆಗಳು ಮತ್ತು ಉತ್ಪಾದನಾ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸಲು ಪರವಾನಗಿ ಪಡೆದಿವೆ. ಇದು ಸೇವಾ ಕ್ಷೇತ್ರಕ್ಕೆ ಅನ್ವಯಿಸುವುದಿಲ್ಲ. ತರಬೇತಿಯಲ್ಲಿ ಭಾಗವಹಿಸುವ ಪೋಲೀಸ್ ಪ್ರಶಿಕ್ಷಣಾರ್ಥಿಗಳು, ಸಾಮಾಜಿಕ ಸ್ವಯಂಸೇವಕ ಪೋರ್ಟಲ್‍ನಲ್ಲಿ ನೋಂದಾಯಿತ ಕ್ಷೇತ್ರ ಸ್ವಯಂಸೇವಕರು, ಐಎಮ್‍ಡಿಯ ಕ್ಷೇತ್ರ ಸಿಬ್ಬಂದಿ, ಕೊಚ್ಚಿ ಮೆಟ್ರೊದ ಕ್ಷೇತ್ರ ಸಿಬ್ಬಂದಿ ಮತ್ತು ಕೊಚ್ಚಿ ವಾಟರ್ ಮೆಟ್ರೋ ಕ್ಷೇತ್ರದ ಸಿಬ್ಬಂದಿಯನ್ನು ವ್ಯಾಕ್ಸಿನೇಷನ್ ಮುಂಚೂಣಿ ಕೆಲಸಗಾರರೆಂದು ಪರಿಗಣಿಸಲಾಗುವುದು.
ಹಜ್ ಯಾತ್ರಾರ್ಥಿಗಳಿಗೆ, ಅಧ್ಯಯನ ಮತ್ತು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ವ್ಯಾಕ್ಸಿನೇಷನ್ ವಿನಾಯಿತಿಗಳನ್ನು ನೀಡಲಾಗುವುದು. 40 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಎಸ್‍ಎಂಎಸ್. ಮೂಲಕ ಮಾಹಿತಿ ನೀಡಿ ಲಸಿಕೆ ನೀಡಲಾಗುವುದು. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಅವರ ಆದ್ಯತೆಯನ್ನು ಲೆಕ್ಕಿಸದೆ ಲಸಿಕೆ ನೀಡಲಾಗುವುದು ಎಂದು ಸಿಎಂ ಹೇಳಿರುವರು.