ನವದೆಹಲಿ: ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಸದ್ಯ ಕೋವಿಡ್-19 ಲಸಿಕೆಯ 90 ಲಕ್ಷಕ್ಕೂ ಅಧಿಕ ಡೋಸ್‌ಗಳು ಲಭ್ಯ ಇವೆ. ಇನ್ನು, ಮೂರು ದಿನಗಳ ಒಳಗಾಗಿ ಇವುಗಳಿಗೆ ಹೆಚ್ಚುವರಿಯಾಗಿ 7 ಲಕ್ಷ ಡೋಸ್‌ಗಳನ್ನು ಒದಗಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಈ ವರೆಗೆ ಲಸಿಕೆಯ 18 ಕೋಟಿಗೂ ಅಧಿಕ ಡೋಸ್‌ಗಳನ್ನು ಉಚಿತವಾಗಿ ನೀಡಿದೆ. ಈ ಪೈಕಿ, ಒಟ್ಟು 17,09,71,429 ಡೋಸ್‌ಗಳನ್ನು ಬಳಕೆ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
'ಕೆಲವು ರಾಜ್ಯಗಳು ಲಸಿಕೆಯ ಕೊರತೆ ಬಗ್ಗೆ ಹೇಳಿಕೊಂಡಿವೆ. ಅವುಗಳಿಗೆ ಪೂರೈಕೆಯಾದ ಲಸಿಕೆಯ ಪ್ರಮಾಣಕ್ಕಿಂತಲೂ ಬಳಕೆಯೇ ಜಾಸ್ತಿಯಾಗಿದೆ ಎಂಬ ಮಾಹಿತಿಯನ್ನು ನೀಡಿವೆ. ಆದರೆ, ಈ ರಾಜ್ಯಗಳು ಸಶಸ್ತ್ರ ಪಡೆಗಳಿಗೆ ತಾವು ಪೂರೈಕೆ ಮಾಡಿರುವ ಲಸಿಕೆಯ ಪ್ರಮಾಣವನ್ನು ಪರಿಗಣನೆಗೆ ತೆಗೆದುಕೊಳ್ಳದೇ ಈ ಅಂಕಿ-ಅಂಶ ನೀಡಿವೆ' ಎಂದು ಸಚಿವಾಲಯ ಹೇಳಿದೆ.
'ಸದ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಬಳಿ ಲಸಿಕೆಯ 90,31,691 ಡೋಸ್‌ಗಳಿವೆ. ಮುಂದಿನ ಮೂರು ದಿನಗಳ ಒಳಗಾಗಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿಯಾಗಿ 7,29,610 ಡೋಸ್‌ಗಳನ್ನು ಪೂರೈಕೆ ಮಾಡಲಾಗುವುದು' ಎಂದು ಹೇಳಿದೆ.
'ಕೇಂದ್ರೀಯ ಔಷಧ ಪ್ರಯೋಗಾಲಯವು (ಸಿಡಿಎಲ್) ಕಂಪನಿಗಳು ಪೂರೈಕೆ ಮಾಡುವ ಲಸಿಕೆಗಳನ್ನು ಅನುಮೋದಿಸುತ್ತದೆ. ಈ ರೀತಿ ಅನುಮೋದಿಸಿದ ಲಸಿಕೆಯ ಶೇ 50ರಷ್ಟು ಡೋಸ್‌ಗಳನ್ನು ಮಾತ್ರ ಪ್ರತಿ ತಿಂಗಳು ಕೇಂದ್ರ ಸರ್ಕಾರ ಖರೀದಿಸುತ್ತದೆ 'ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.