ನವದೆಹಲಿ; ದೇಶದಲ್ಲಿ ಕೊರೋನಾ ಲಸಿಕೆ ಅಭಿಯಾನದಲ್ಲಿ ತಕ್ಷಣಕ್ಕೆ ಎಲ್ಲರಿಗೂ ಕೊರೋನಾ ಲಸಿಕೆ ಸಿಗುವುದಿಲ್ಲ ಎಂಬ ವಾಸ್ತವಾಂಶದ ಮಧ್ಯೆ, ಕೇಂದ್ರ ಸರ್ಕಾರ ಕಾರ್ಖಾನೆಯಿಂದ ಲಸಿಕೆ ಲಸಿಕಾ ಕೇಂದ್ರಕ್ಕೆ ತಲುಪಲು 8ರಿಂದ 9 ದಿನಗಳು ಬೇಕಾಗುತ್ತವೆ, ಇವುಗಳ ಮಧ್ಯೆ ನಡೆಯುವ ಪ್ರಕ್ರಿಯೆಯಿಂದಾಗಿ ಲಸಿಕೆ ಸಿಗುವುದು ವಿಳಂಬವಾಗುತ್ತಿದೆ ಎಂದು ಹೇಳಿದೆ.
ಈಗಿರುವ ಅಂಕಿಅಂಶ ಪ್ರಕಾರ, ಸೆರಂ ಇನ್ಸ್ ಟಿಟ್ಯೂಟ್ ಮತ್ತು ಭಾರತ್ ಬಯೋಟೆಕ್ ತಲಾ 6 ಮತ್ತು 2 ಕೋಟಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ಉತ್ಪತ್ತಿ ಮಾಡುತ್ತಿದ್ದು, ಈ ತಿಂಗಳಾಂತ್ಯಕ್ಕೆ 5 ಕೋಟಿ ಲಸಿಕೆಗಳನ್ನು ಉತ್ಪಾದಿಸುವ ನಿರೀಕ್ಷೆಯಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ಎಲ್ಲಾ ಲಸಿಕೆಗಳು ಆರಂಭದಲ್ಲಿ ಕಾನೂನುಬದ್ಧ ಸ್ಥಿರತೆ ಮತ್ತು ಸ್ಟೆರಿಲಿಟಿ ಪರೀಕ್ಷೆಗಳನ್ನು ಮಾಡಬೇಕಾಗುತ್ತದೆ, ಅದಕ್ಕೆ ವಾರದ ಸಮಯ ಹಿಡಿಯುತ್ತದೆ. ನಂತರ ಅವುಗಳನ್ನು ವಿಭಾಗಗಳನ್ನಾಗಿ ಮಾಡಿ ಪ್ರತಿ ಭಾಗವನ್ನು ಸೆಂಟ್ರಲ್ ಡ್ರಗ್ಸ್ ಲ್ಯೊಬೊರೇಟರಿಗೆ ಟೆಸ್ಟಿಂಗ್ ಗೆ ಕಳುಹಿಸಬೇಕಾಗುತ್ತದೆ, ಅದಕ್ಕೆ 1ರಿಂದ 2 ದಿನ ಸಮಯ ಹಿಡಿಯುತ್ತದೆ. ಫ್ಯಾಕ್ಟರಿಯಲ್ಲಿ ಉತ್ಪತ್ತಿಯಾದ ಲಸಿಕೆ ಲಸಿಕಾ ಕೇಂದ್ರಕ್ಕೆ ಬಂದು ತಲುಪಲು 8ರಿಂದ 9 ದಿನ ಹಿಡಿಯುತ್ತದೆ ಎಂದು ವಿವರಿಸಿದರು.
ವಿದೇಶಿ ಲಸಿಕೆ ತಯಾರಕರಾದ ಫಿಜರ್ ಮತ್ತು ಮೊಡೆರ್ನಾ ಅವರೊಂದಿಗೆ ಎರಡು ರೀತಿಯಲ್ಲಿ ಸಮನ್ವಯ ಸಾಧಿಸುತ್ತಿದೆ ಎಂದು ಸಚಿವಾಲಯ ಹೇಳಿದೆ. ಅನುಮೋದನೆ ಮತ್ತು ಸಂಗ್ರಹಣೆ, ಲಸಿಕೆ ಪ್ರಮಾಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ಬಗ್ಗೆ ಕೇಂದ್ರವು ನಿರ್ಧರಿಸುತ್ತದೆ.