ನವದೆಹಲಿ : ಕೋವಿಡ್ ಸಮರದಲ್ಲಿ ದೇಶದ ಆರೋಗ್ಯ ವ್ಯವಸ್ಥೆಯ ಬಲ ಹೆಚ್ಚಿಸಲು ಆಯುಷ್ ಮಂತ್ರಾಲಯದ ಅಡಿ ಬರುವ 8 ಲಕ್ಷಕ್ಕೂ ಮೀರಿದ ವೈದ್ಯರು ಮತ್ತು ವೈದ್ಯಕೀಯ ಕಾರ್ಯಕರ್ತರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ಆಯುಷ್ ರಾಜ್ಯ ಸಚಿವ ಕಿರೆನ್ ರಿಜಿಜು ಘೋಷಿಸಿದ್ದಾರೆ. ಈಗಾಗಲೇ ಕೋವಿಡ್ ನ ಕ್ಲಿನಿಕಲ್ ನಿರ್ವಹಣೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ತರಬೇತಿ ನೀಡಲಾಗಿದ್ದು, ಆಯುಷ್ ಮಾನವ ಸಂಪನ್ಮೂಲವನ್ನು ಮುಂಚೂಣಿ ಕೋವಿಡ್ ಕರ್ತವ್ಯಗಳಿಗೆ ನಿಯುಕ್ತಿಗೊಳಿಸುವ ಬಗ್ಗೆ ಸೂಚನೆ ಜಾರಿಯಾಗಿದೆ ಎಂದಿದ್ದಾರೆ.
ಜೊತೆಗೆ ದೇಶಾದ್ಯಂತ ಇರುವ ಆಯುಷ್ ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸಾ ಘಟಕಗಳಾಗಿ ಪರಿವರ್ತಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ. ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 750 ಆಯುಷ್ ಆಸ್ಪತ್ರೆಗಳನ್ನು ಮತ್ತು ಆಯುಷ್ ನ ನ್ಯಾಷನಲ್ ಇನ್ಸ್‍ಸ್ಟಿಟ್ಯೂಟ್‍ಗಳು ಮತ್ತು ಸಂಶೋಧನಾ ಘಟಕಗಳಲ್ಲಿರುವ 86 ಕ್ಲಿನಿಕಲ್ ಫೆಸಿಲಿಟಿಗಳನ್ನು ಕೋವಿಡ್ ಚಿಕಿತ್ಸೆಗೆ ಸೂಕ್ತವಾಗುವ ರೀತಿಯಲ್ಲಿ ಪರಿವರ್ತಿಸಲು ಆಯುಷ್ ಮಂತ್ರಾಲಯ ಸಹಕಾರ ನೀಡಲಿದೆ. ಇದರಿಂದ ಹೊಸದಾಗಿ 50,000 ಬೆಡ್ ಗಳು ಕೋವಿಡ್ ಚಿಕಿತ್ಸೆಗೆ ಲಭ್ಯವಾಗಲಿವೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಆಯುರ್ವೇದ, ಯುನಾನಿ, ಹೋಮಿಯೋಪಥಿಯಂತಹ ಪರ್ಯಾಯ ಚಿಕಿತ್ಸಾ ಪದ್ಧತಿಗಳನ್ನು ಸೂಕ್ತ ಶೈಕ್ಷಣಿಕ ತರಬೇತಿಯೊಂದಿಗೆ ಅಭ್ಯಸಿಸುವ ವೈದ್ಯರು ಆಯುಷ್ ಮಂತ್ರಾಲಯದ ಅಡಿಯಲ್ಲಿ ಬರುತ್ತಾರೆ. ಕೊರೊನಾ ಉಲ್ಬಣದ ಈ ಪರಿಸ್ಥಿತಿಯಲ್ಲಿ ಆಯುಷ್ ಮಂತ್ರಾಲಯವು ಸುಮಾರು 8.32 ಲಕ್ಷ ಆಯುಷ್ ವೈದ್ಯಕೀಯ ವೃತ್ತಿಪರರ ವಿವರಗಳನ್ನು ಕೇಂದ್ರ ಸರ್ಕಾರದ ಕೋವಿಡ್ ವಾರಿಯರ್ಸ್ ಪೆÇೀರ್ಟಲ್ ನಲ್ಲಿ ಒದಗಿಸಿದೆ ಎಂದು ಸಚಿವಾಲಯ ತಿಳಿಸಿದೆ.