ಕೋಝಿಕೋಡ್: ಎಲ್.ಡಿ.ಎಫ್.ನ ಟಿಪಿ ರಾಮಕೃಷ್ಣನ್ ಅವರು ಕೋಝಿಕೋಡ್ ಜಿಲ್ಲೆಯ ಪೆರಾಂಬ್ರಾದಿಂದ ವಿಜೇತರಾಗಿರುವರು. ಈ ಚುನಾವಣೆಯಲ್ಲಿ ಇದು ಮೊದಲ ಘೋಷಿತ ವಿಜಯವಾಗಿದೆ. ಪ್ರಸ್ತುತ ಸರ್ಕಾರದ ಸಂಪುಟ ಸದಸ್ಯರೂ ಆಗಿರುವ ಟಿ.ಪಿ.ರಾಮಕೃಷ್ಣನ್ 5031 ಮತಗಳಿಂದ ಜಯಗಳಿಸಿದ್ದಾರೆ. ಎಲ್ಲಾ 140 ಕ್ಷೇತ್ರಗಳಲ್ಲಿ ಫಲಿತಾಂಶಗಳು ಹೊರಬರುತ್ತಿರುವುದರಿಂದ, ರಾಜ್ಯದಲ್ಲಿ ಎಲ್ ಡಿ ಎಫ್ ಗೆ ಅನುಕೂಲಕರವಾಗಿದೆ. ಎಲ್ ಡಿ ಎಫ್ 90 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಯುಡಿಎಫ್ ಕೇವಲ 47 ಸ್ಥಾನಗಳಲ್ಲಿ ಮುನ್ನಡೆ ಹೊಂದಿದೆ. ಎನ್ ಡಿ ಎ ಮೂರು ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ನೇಮಂ, ಪಾಲಕ್ಕಾಡ್ ಮತ್ತು ತ್ರಿಶೂರ್ ಕ್ಷೇತ್ರಗಳಲ್ಲಿ ಎನ್ ಡಿ ಎ ಮುಂಚೂಣಿಯಲ್ಲಿದೆ.
ಈ ಚುನಾವಣೆಯ ಕೇಂದ್ರ ಬಿಂದುಗಳಲ್ಲಿ ಒಂದಾದ ಪಾಲಾ ಕ್ಷೇತ್ರದಲ್ಲಿ ಮಾಣಿ ಸಿ. ಕಾಪ್ಪನ್ ಜೋಸ್ ಕೆ.ಮಣಿ ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸುತ್ತಿದ್ದಾರೆ. ಯುಡಿಎಫ್‍ನ ಭದ್ರಕೋಟೆಯಾದ ಕೊಟ್ಟಾಯಂ ಜಿಲ್ಲೆಯಲ್ಲಿ ಕೇವಲ ಮೂರು ಸ್ಥಾನಗಳ ಮುನ್ನಡೆ ಹೊಂದಿದೆ. ಪುತ್ತುಪಳ್ಳಿ, ಕೊಟ್ಟಾಯಂ ಮತ್ತು ಪಾಲಾದಲ್ಲಿ ಯುಡಿಎಫ್ ಮುನ್ನಡೆ ಸಾಧಿಸುತ್ತಿದೆ.