ವಾಷಿಂಗ್ಟನ್: ಕೊರೋನಾ ವೈರಸ್ ತವರು ಚೀನಾಗೆ ಮತ್ತೆ ಹೊಸ ತಲೆನೋವು ಆರಂಭವಾಗಿದ್ದು, 90 ದಿನಗಳಲ್ಲಿ ಕೋವಿಡ್ ವೈರಸ್ ನ ಮೂಲದ ಬಗ್ಗೆ ಮಾಹಿತಿ ನೀಡಿ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.
ಜಗತ್ತಿನಾದ್ಯಂತ ವ್ಯಾಪಕ ಮರಣ ಮೃದಂಗ ಭಾರಿಸಿರುವ ಮಾರಕ ಕೊರೋನಾ ವೈರಸ್ ಮೂಲದ ಬಗ್ಗೆ ಮತ್ತೆ ತನಿಖೆ ಆರಂಭವಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ತಂಡವನ್ನು ಹೊರತು ಪಡಿಸಿ ಜಾಗತಿಕ ವಿಜ್ಞಾನಿಗಳ ತಂಡವೊಂದು ಇದರ ಅಧ್ಯಯನ ಮುಂದುವರೆಸಿರುವಂತೆಯೇ ಇತ್ತ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಕೋವಿಡ್ ವೈರಸ್ ನ ಮೂಲದ ಬಗ್ಗೆ ತನಿಖೆ ನಡೆಸಿ 90 ದಿನಗಳಲ್ಲಿ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಅಮೆರಿಕ ತಜ್ಞರು ಮತ್ತು ವಿಜ್ಞಾನಿಗಳು ಕೋವಿಡ್-19 ವೈರಸ್ ನ ಮೂಲದ ಕುರಿತು ತನಿಖೆ ನಡೆಸುತ್ತಿದ್ದು, ಇದರ ಜೊತೆಗೆ ಅಮೆರಿಕ ಗುಪ್ತಚರ ಇಲಾಖೆಗಳ ಕೆಲ ತಂಡಗಳೂ ಕೂಡ ಈ ತನಿಖೆಯ ಮೇಲುಸ್ತುವಾರಿ ನೋಡಿಕೊಳ್ಳಲಿವೆ.
ಈ ಬಗ್ಗೆ ಮಾಹಿತಿ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, 'ಕೊರೋನಾ ವೈರಸ್ ಮೂಲದ ಕುರಿತು ಒಂದು ನಿಶ್ಚಿತ ತೀರ್ಮಾನಕ್ಕೆ ಹತ್ತಿರವಾಗಬಲ್ಲ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿಶ್ಲೇಷಿಸಲುಸ ಗುಪ್ತಚರ ಸಂಸ್ಥೆಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ನಡೆಯುತ್ತಿರುವ ತನಿಖೆಯನ್ನು ಚುರುಕುಗೊಳಿಸಿ 90 ದಿನಗಳಲ್ಲಿ ಈ ಕುರಿತ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಪ್ರಯತ್ನದಲ್ಲಿ ನಮ್ಮ ನ್ಯಾಷನಲ್ ಲ್ಯಾಬ್ಸ್ ಮತ್ತು ನಮ್ಮ ಸರ್ಕಾರದ ಇತರ ಇಂಟೆಲಿಜೆನ್ಸ್ ಏಜೆನ್ಸಿಗಳು ಪ್ರಯತ್ನಗಳನ್ನು ಹೆಚ್ಚಿಸಲು ಕೆಲಸ ಮಾಡಬೇಕೆಂದು ನಾನು ಕೇಳಿದ್ದೇನೆ. ಈ ವರದಿಯ ಭಾಗವಾಗಿ, ಅಧ್ಯಕ್ಷ ಜೋ ಬೈಡನ್ ಚೀನಾಕ್ಕೆ ನಿರ್ದಿಷ್ಟವಾದ ಪ್ರಶ್ನೆಗಳನ್ನು ಒಳಗೊಂಡಂತೆ ಹೆಚ್ಚಿನ ವಿಚಾರಣೆಯ ಕ್ಷೇತ್ರಗಳನ್ನು ಕೇಳಿದ್ದಾರೆ ಎಂದು ಹೇಳಲಾಗಿದೆ.
'ಪೂರ್ಣ, ಪಾರದರ್ಶಕ, ಸಾಕ್ಷ್ಯ ಆಧಾರಿತ ಅಂತಾರಾಷ್ಟ್ರೀಯ ತನಿಖೆಯಲ್ಲಿ ಭಾಗವಹಿಸಲು ಮತ್ತು ಎಲ್ಲಾ ಸಂಬಂಧಿತ ದತ್ತಾಂಶ ಮತ್ತು ಪುರಾವೆಗಳ ಸಂಗ್ರಹಕ್ಕೆ ಅನುವು ಮಾಡಿಕೊಡುವಂತೆ ಚೀನಾವನ್ನು ಒತ್ತಾಯಿಸಲು ಅಮೆರಿಕ ವಿಶ್ವದಾದ್ಯಂತ ಸಮಾನ ಮನಸ್ಕ ಪಾಲುದಾರ ರಾಷ್ಟ್ರಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಬೈಡೆನ್ ಹೇಳಿದರು.