ಜೋಧಪುರ: ರಾಜಸ್ಥಾನದ ಜಲೋರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಘಟನೆಯಲ್ಲಿ ಸುಮಾರು 95 ಅಡಿ ಆಳದ ತೆರೆದ ಕೊಳವೆ ಬಾವಿಗೆ ನಾಲ್ಕು ವರ್ಷದ ಬಾಲಕ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನನ್ನು ಅನಿಲ್ ದೇವಾಸಿ ಎಂದು ಗುರುತಿಸಲಾಗಿದ್ದು, ಆತನನ್ನು ರಕ್ಷಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಇಂತಹ ಕಾರ್ಯಾಚರಣೆಯನ್ನು ಮಾಡಬೇಕಾದ ನುರಿತ ತಜ್ಞರ ಅನುಪಸ್ಥಿತಿಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ವಿಳಂಬವುಂಟಾಗಿತ್ತು ಎಂದು ಸಂಚೋರ್‌ನ ಸ್ಟೇಷನ್ ಆಫೀಸರ್ (ಎಸ್‌ಎಚ್‌ಒ) ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಲಾಚ್ರಿ ಗ್ರಾಮಕ್ಕೆ ಧಾವಿಸಿರುವ ರಾಷ್ಟ್ರೀಯ ವಿಪತ್ತುನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಗಳು ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಕೊಳವೆ ಬಾವಿಗೆ ಕ್ಯಾಮೆರಾ ಇಳಿಸಿ ನೋಡಿದಾಗ ಬಾಲಕ ಸುಮಾರು 95 ಅಡಿ ಆಳದಲ್ಲಿ ಸಿಕ್ಕಿ ಬಿದ್ದಿರುವುದು ಕಂಡು ಬಂದಿದೆ.
ಬಾಲಕ ಜೀವಂತವಾಗಿದ್ದು, ಆಮ್ಲಜನಕ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಆಹಾರವನ್ನು ಒದಗಿಸಲಾಗುತ್ತಿದ್ದು, ಬಾಲಕನೊಂದಿಗೆ ನಿರಂತರ ಸಂಪರ್ಕ ಸಾಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ತಂದೆ ನಗರಂ ದೇವಾಸಿ ಒಡೆತದ ಜಮೀನಿನಲ್ಲಿ ಎರಡು ದಿನಗಳ ಹಿಂದೆಯಷ್ಟೇ ಕೊಳವೆ ಬಾವಿ ಕೊರೆಯಲಾಗಿತ್ತು. ಗುರುವಾರ ಮಧ್ಯಾಹ್ನ ಆಟವಾಡುತ್ತಿದ್ದ ವೇಳೆ ಬಾಲಕ ಕೊಳವೆ ಬಾವಿಗೆ ಬಿದ್ದಿದ್ದಾನೆ ಎಂಬುದು ತಿಳಿದು ಬಂದಿದೆ.