ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ತೀವ್ರವಾಗಿದ್ದು, ಬಹುತೇಕ ಎಲ್ಲೆಡೆ ಕರ್ಫ್ಯೂ, ಲಾಕ್‌ಡೌನ್ ಹೇರಿಕೆ ಮಾಡಲಾಗಿದೆ. ಕೊರೊನಾ ಮಾರ್ಗಸೂಚಿ, ಕಟ್ಟುನಿಟ್ಟಿನ ನಿಯಮಗಳ ಜಾಗತಿಕ ಸೂಚ್ಯಂಕ(Stringency index) ದಲ್ಲಿ ಭಾರತದ ಸ್ಕೋರ್ ಪ್ರಕಟವಾಗಿದೆ.
ಏಪ್ರಿಲ್ 1ರಂದು ಭಾರತದ ಸೂಚ್ಯಂಕದ ಸ್ಕೋರ್ 58 ಆಗಿತ್ತು. ಏಪ್ರಿಲ್ 30ರಂದು ಸೂಚ್ಯಂಕದ ಸ್ಕೋರ್ 74 ದಾಟಿತ್ತು.
ಆಕ್ಸ್‌ಫರ್ಡ್ ಸರ್ಕಾರದ ಪ್ರತಿಕ್ರಿಯೆ ಟ್ರ್ಯಾಕರ್ ಅನುಗುಣವಾಗಿ ಸೂಚ್ಯಂಕದ ಸ್ಕೋರ್ ನೀಡಲಾಗುತ್ತದೆ. ಕಚೇರಿ, ಶಾಲೆ, ಸಾರ್ವಜನಿಕ ಸಭೆ, ಸಮಾರಂಭ, ಅಂತಾರಾಜ್ಯ ಸಂಚಾರ, ಸಾರಿಗೆ ನಿರ್ಬಂಧ, ಸಾರಿಗೆ ಸಂಚಾರ ಮುಂತಾದವುಗಳ ಮೇಲೆ ವಿಧಿಸಲಾಗಿರುವ ನಿರ್ಬಂಧದ ಮೇಲೆ ಸ್ಕೋರ್ ನೀಡಲಾಗುತ್ತದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬಹುತೇಕ 100 ಅಂಕ ಗಳಿಸಿತ್ತು. ಅಂದು ದೇಶದೆಲ್ಲೆಡೆ ಸಂಪೂರ್ಣ ಲಾಕ್‌ಡೌನ್ ಹೇರಿಕೆ ಇತ್ತು. ಈಗ ಮತ್ತೊಮ್ಮೆ ಅದೇ ಪರಿಸ್ಥಿತಿ ಎದುರಾಗಿದೆ.
ಸುಮಾರು 26 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಲಾಕ್‌ಡೌನ್, ಕರ್ಫ್ಯೂ ಹೇರಿಕೆ ಮಾಡಿವೆ. ದೇಶದ ಶೇ 98ರಷ್ಟು ಮಂದಿ ಒಂದಲ್ಲ ಒಂದು ರೀತಿ ಲಾಕ್‌ಡೌನ್ ಎದುರಿಸುತ್ತಿದ್ದಾರೆ.
ಎಲ್ಲೆಲ್ಲಿ ಲಾಕ್‌ಡೌನ್ ಹೇರಿಕೆ:
ತಮಿಳುನಾಡು, ಕೇರಳ,ಕರ್ನಾಟಕ, ರಾಜಸ್ಥಾನ, ಬಿಹಾರ, ಉತ್ತರಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಇದೆ. ಗುಜರಾತ್, ತೆಲಂಗಾಣ, ಅಸ್ಸಾಂ ಹಾಗೂ ಹಿಮಾಚಲ ಪ್ರದೇಶದಲ್ಲಿ ಕಠಿಣ ನಿಯಮಾವಳಿಗಳಿವೆ ಆದರೆ, ಸಂಪೂರ್ಣ ಲಾಕ್‌ಡೌನ್ ಹೇರಿಕೆ ಮಾಡಿಲ್ಲ.
ತಮಿಳುನಾಡು ಹಾಗೂ ಕೇರಳದಲ್ಲಿ ದಿನಗೂಲಿಗಳಿಗೆ, ಆರ್ಥಿಕವಾಗಿ ಹಿಂದುಳಿದ ಸಂತ್ರಸ್ತರಿಗೆ ಪರಿಹಾರ ಮೊತ್ತ ಘೋಷಿಸಿವೆ ಜೊತೆಗೆ ಅಹಾರ ಪ್ಯಾಕೇಟ್ ವಿತರಿಸಲಾಗುತ್ತಿದೆ. ಇತರೆ ರಾಜ್ಯಗಳಲ್ಲಿ ಇನ್ನೂ ಪರಿಹಾರ ಪ್ಯಾಕೇಜ್ ಘೋಷಿಸಿಲ್ಲ.