ತಿರುವನಂತಪುರ: ರಾಜ್ಯದ ಆಡಳಿತ ಚುಕ್ಕಾಣಿ ಮರಳಿ ಎಲ್.ಡಿ.ಎಫ್ ಗೆ ಲಭಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಅಧಿಕೃತ ನಿವಾಸವಾದ ಕ್ಲಿಫ್ ಹೌಸ್ ನ ನವೀಕರಣ ಕಾರ್ಯಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ. ಈ ಯೋಜನೆಗಾಗಿ 98 ಲಕ್ಷ ರೂ.ಮಂಜೂರು ಮಾಡಲಾಗಿದೆ.
ಯೋಜನೆಯ ಗುತ್ತಿಗೆಯನ್ನು ಟೆಂಡರ್ ಆಹ್ವಾನಿಸದೆ ಉರುಲುಂಗಲ್ ಲೇಬರ್ ಕಾಂಟ್ರಾಕ್ಟ್ ಸೊಸೈಟಿಗೆ ನೀಡಲಾಯಿತು. ಚಾಲಕರು, ಗನ್ ಮ್ಯಾನ್, ಭದ್ರತಾ ಸಿಬ್ಬಂದಿ ಮತ್ತು ಪರಿಚಾರಕರಿಗೆ ವಿಶ್ರಾಂತಿ ಕೊಠಡಿಗಳ ನವೀಕರಣವೂ ಈ ಯೋಜನೆಯಲ್ಲಿ ಸೇರಿದೆ.
ಸಾಮಾನ್ಯವಾಗಿ, ಲೋಕೋಪಯೋಗಿ ಇಲಾಖೆ ಅಂತಹ ಯೋಜನೆಗಳಿಗೆ ಟೆಂಡರ್‍ಗಳನ್ನು ಆಹ್ವಾನಿಸಿ ಗುತ್ತಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ, ಮಂತ್ರಿಗಳು ಅವರಿಗೆ ನಿಗದಿಪಡಿಸಿದ ನಿವಾಸಗಳಲ್ಲಿ ವಿಶೇಷ ನವೀಕರಣಗಳನ್ನು ಶಿಫಾರಸು ಮಾಡುತ್ತಾರೆ. ಇದರ ಆಧಾರದ ಮೇಲೆ ಅಂದಾಜು ಯೋಜನಾ ವೆಚ್ಚ ಸಿದ್ಧಪಡಿಸಿದ ನಂತರ ಪಿಡಬ್ಲ್ಯೂಡಿ ಟೆಂಡರ್‍ಗಳನ್ನು ಆಹ್ವಾನಿಸಲಾಗುತ್ತದೆ. ಆದರೆ ಕ್ಲಿಫ್ ಹೌಸ್ ನವೀಕರಣ ಯೋಜನೆಯು ಇಂತಹ ಕ್ರಮಗಳಿಗೆ ತಿಲಾಂಜಲಿ ನೀಡಿದೆ.
ಮೇ 2 ರಂದು ಪ್ರವಾಸೋದ್ಯಮ ನಿರ್ದೇಶಕರು ನಿರ್ಮಾಣ ಕಾರ್ಯಕ್ಕೆ ಅನುಮತಿ ಕೋರಿ ಪತ್ರವೊಂದನ್ನು ಕಳುಹಿಸಿದ್ದರು. ಕ್ಲಿಫ್ ಹೌಸ್ ಸೇರಿದಂತೆ 10 ಮಂತ್ರಿ ನಿವಾಸಗಳು ಪಾರಂಪರಿಕ ಪಟ್ಟಿಯಲ್ಲಿವೆ. ಮೊದಲ ಪಿಣರಾಯಿ ಸರ್ಕಾರದ ಅವಧಿಯಲ್ಲಿ ಕ್ಲಿಫ್ ಹೌಸ್ ನವೀಕರಣಕ್ಕಾಗಿ 9,56,871 ರೂಗಳನ್ನು ಖರ್ಚು ಮಾಡಲಾಗಿತ್ತು. ಸಚಿವರುಗಳ ವಸತಿ ನವೀಕರಣಕ್ಕೆ 82,35,743 ರೂ.ಗಳನ್ನೂ ವಿನಿಯೋಗಿಸಲಾಗಿತ್ತು.
ಉಮ್ಮನ್ ಚಾಂಡಿ ಆಡಳಿತ ಅವಧಿಯಲ್ಲಿ, ನವೀಕರಣಕ್ಕಾಗಿ `4.3 ಕೋಟಿ ಖರ್ಚು ಮಾಡಲಾಗಿತ್ತು. ಈ ಹಿಂದೆ ವಿ.ಎಸ್.ಅಚ್ಚ್ಯುತಾನಂದನ್ ಸರ್ಕಾರದ ಅವಧಿಯಲ್ಲಿ ಸಚಿವರ ನಿವಾಸಗಳ ನವೀಕರಣಕ್ಕಾಗಿ ಖರ್ಚು ಮಾಡಿದ ಮೊತ್ತದ ಬಗ್ಗೆ ವಿವಾದವಿತ್ತು. ಆಗಿನ ಮಂತ್ರಿಗಳು ಸಿ.ದಿವಾಕರನ್ ಮತ್ತು ಕೊಡಿಯೇರಿ ಬಾಲಕೃಷ್ಣನ್ ಕ್ರಮವಾಗಿ 17 ಲಕ್ಷ ಮತ್ತು 11 ಲಕ್ಷ ರೂ.ಗಳನ್ನು ವಿನಿಯೋಗಿಸಿದ್ದರು. ವಿವಾದದ ನಂತರ, ಅವರು ನವೀಕರಣವನ್ನು ಸ್ಥಗಿತಗೊಳಿಸಬೇಕಾಯಿತು.