ನವದೆಹಲಿ: ಕೇಂದ್ರ ಸರ್ಕಾರಕ್ಕೆ ಲಾಭಾಂಶದ ರೂಪದಲ್ಲಿ 99,122 ಕೋಟಿ ರೂಪಾಯಿ ಮೊತ್ತವನ್ನು ವರ್ಗಾಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ನಿರ್ಧರಿಸಿದೆ.
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೇಂದ್ರ ನಿರ್ದೇಶಕರ 589 ನೇ ಸಭೆಯಲ್ಲಿ ಹೆಚ್ಚುವರಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಜುಲೈ-ಜೂನ್ ಅವಧಿಯನ್ನು 'ಲೆಕ್ಕಪತ್ರ ಅವಧಿ' ಎಂದು ಈ ಮೊದಲು ಪರಿಗಣಿಸುತ್ತಿದ್ದ ಆರ್‌ಬಿಐ, ಈಗ ಏಪ್ರಿಲ್‌ನಿಂದ ಮಾರ್ಚ್ ಕೊನೆವರೆಗೆ ಹಣಕಾಸು ವರ್ಷವನ್ನೇ ತನ್ನ 'ಲೆಕ್ಕಪತ್ರ ಅವಧಿ' ಎಂದು ಪರಿಗಣಿಸಲು ಆರಂಭಿಸಿದೆ.
2019-20ರ ಲೆಕ್ಕಪತ್ರ ಅವಧಿಯಲ್ಲಿ 57,128 ಕೋಟಿ ಹಣವನ್ನು ಕೇಂದ್ರ ಸರ್ಕಾರಕ್ಕೆ ಆರ್‌ಬಿಐ ವರ್ಗಾಯಿಸಿದೆ. 2018-19ರಲ್ಲಿ ಆರ್‌ಬಿಐನಿಂದ ಕೇಂದ್ರ ಸರ್ಕಾರಕ್ಕೆ 1.23 ಕೋಟಿ ನೀಡಲಾಗಿತ್ತು. ಇದರ ಜೊತೆಯಲ್ಲಿ 52,637 ಕೋಟಿ ಹೆಚ್ಚುವರಿ ಮೊತ್ತವನ್ನು ಕೂಡ ಆರ್‌ಬಿಐ ವರ್ಗಾಯಿಸಿತ್ತು.