ನಾಗಪಟ್ಟಿಣಂ: ಕಳೆದೆರಡು ದಿನಗಳಿಂದ ಟೌಕ್ಟೇ ಚಂಡಮಾರುತದ ಪ್ರಭಾವ ಜೋರಾಗಿದೆ. ನಾಗಪಟ್ಟಿಣಂ ಜಿಲ್ಲೆಯ 7 ಮಂದಿ ಸೇರಿದಂತೆ 9 ಮೀನುಗಾರರು ನಾಪತ್ತೆಯಾಗಿದ್ದಾರೆ. ಚಂಡಮಾರುತದ ಜೋರಾದ ಅಲೆಗೆ ಸಿಲುಕಿ ಅರಬ್ಬೀ ಸಮುದ್ರಕ್ಕೆ ಮೀನುಗಾರಿಕೆಗೆ ದೋಣಿಗಳಲ್ಲಿ ಹೋಗಿದ್ದ ಮೀನುಗಾರರು ವಾಪಸ್ ಬರುವ ಹೊತ್ತಿಗೆ ಚಂಡಮಾರುತದ ಗಾಳಿಯ ರಭಸಕ್ಕೆ ಸಿಲುಕಿ ದೋಣಿ ಮಗುಚಿಬಿದ್ದು ಸಮುದ್ರ ಪಾಲಾಗಿದ್ದಾರೆ.
ಟೌಕ್ಟೇ ಚಂಡಮಾರುತದಿಂದಾಗಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ನಿನ್ನೆ ನಸುಕಿನ ಜಾವ 3 ಗಂಟೆಯ ಹೊತ್ತಿಗೆ ಬಿರುಗಾಳಿಯ ಎಚ್ಚರಿಕೆಯನ್ನು ಈಗಾಗಲೇ ಸಮುದ್ರಕ್ಕೆ ಇಳಿದಿದ್ದ ಮೀನುಗಾರರಿಗೆ ನೀಡಲಾಗಿತ್ತು. ಆಗ ಮೀನುಗಾರ ಮಣಿಕಾನಂದ ಮತ್ತು ಅವರ ತಂಡ ಹಿಂತಿರುಗಿ ಬರುತ್ತಿದ್ದಾಗ ಅಲೆಗೆ ಸಿಲುಕಿ ದೋಣಿ ಮಗುಚಿಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ನಾಗಪಟ್ಟಿಣಂ ಜಿಲ್ಲೆಯ ಅರಬ್ಬೀ ಸಮುದ್ರ ತೀರದ ಆಳದಲ್ಲಿ ನಿನ್ನೆ 9 ಮಂದಿ ಮೀನುಗಾರರು ಮೀನುಗಾರಿಕೆ ಮಾಡುತ್ತಿದ್ದರು. ಬಿರುಗಾಳಿಯ ಮುನ್ನೆಚ್ಚರಿಕೆ ಸಿಕ್ಕಿದ ಕೂಡಲೇ ಹಿಂತಿರುಗುತ್ತಿದ್ದರು. ಅರಿಯನಾತು ಥೆರು ಮೂಲದ ಮತ್ತೊಂದು ಗಿಲ್ನೆಟರ್-ಲಾಂಗ್‌ಲೈನರ್ ದೋಣಿಯಲ್ಲಿನ ಮೀನುಗಾರರು ಸಮಂತಂಪೆಟ್ಟೈ ದೋಣಿ ಬೃಹತ್ ಅಲೆಯಿಂದ ಉರುಳುತ್ತಿರುವುದನ್ನು ಕಂಡರು. ಈ ಘಟನೆ ನಡೆದಿದ್ದು ನಿನ್ನೆ ನಸುಕಿನ ಜಾವ 3 ಗಂಟೆ ಸುಮಾರಿಗೆ, ನಮಗೆ ಅಪರಾಹ್ನದ ಹೊತ್ತಿಗೆ ಮಾಹಿತಿ ಸಿಕ್ಕಿತು. ಕೊಚ್ಚಿ ಹೋದವರ ರಕ್ಷಣೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಸಮಂತಪೆಟ್ಟೈಯ ಮೀನುಗಾರರ ಪ್ರತಿನಿಧಿ ಇ ವಿಜಯನ್ ತಿಳಿಸಿದ್ದಾರೆ.
ಸಮಂತಂಪೆಟ್ಟೈ ಮೂಲದ ಮೀನುಗಾರಿಕೆ ದೋಣಿ ಕೊಚ್ಚಿನ್ ಮೀನುಗಾರಿಕೆ ಬಂದರಿನಿಂದ ಕಳೆದ ಏಪ್ರಿಲ್ 29ರಂದು ಹೊರಟಿತ್ತು. ತಂಡದಲ್ಲಿ, ಐ ಮಣಿಕಂದನ್ (25), ಅವರ ಸಹೋದರ ಮಣಿವೆಲ್ (23), ಮತ್ತು ಅವರ ತಂದೆ ಎಡುಂಬನ್ ಇದ್ದು (55) ಎಲ್ಲರೂ ಸಮಂತಂಪೆಟ್ಟೈ ಮೂಲದವರಾಗಿದ್ದಾರೆ. ಇನ್ನು ನಾಗೋರ್‌ನ ಬಿ ದಿನೇಶ್ (33), ಮೂವಲೂರಿನ ಸಿ ಎಲಾಂಚೆಜಿಯಾನ್ (26), ಅಕ್ಕರೈಪೆಟ್ಟೆಯ ಕೆ ಪ್ರವೀಣ್ (35), ವನಗಿರಿ ಮೂಲದ ಮೂರ್ತಿ (30) ಇದ್ದರು. ಕಡಲೂರು ಜಿಲ್ಲೆಯ ಕಿಲ್ಲೈನ ಸಿ ಮುರುಗನ್ (40) ಮತ್ತು ಇನ್ನೊಬ್ಬ ಅಪರಿಚಿತ ಮೀನುಗಾರ ಕೂಡ ತಂಡದಲ್ಲಿದ್ದರು.
ಇವರೆಲ್ಲರೂ ಕಳೆದ ಎರಡು ವಾರಗಳಿಂದ ಅರಬ್ಬೀ ಸಮುದ್ರದಲ್ಲಿ 300 ಮೈಲು ದೂರದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ನಿನ್ನೆ ಮಧ್ಯಾಹ್ನದಿಂದ ನಡೆಸಿದ ಹುಡುಕಾಟದಲ್ಲಿ ಯಾರೂ ಸಿಕ್ಕಿಲ್ಲ. ನಾಪತ್ತೆಯಾದವರ ಕುಟುಂಬಸ್ಥರು ನಾಗಪಟ್ಟಿಣಂ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ತಮ್ಮವರನ್ನು ಹುಡುಕಿಕೊಡುವಂತೆ ಕೋರಿದ್ದಾರೆ.