ತಿರುವನಂತಪುರ: ಕೋವಿಡ್ ಹರಡುವಿಕೆಯ ಅನಿಯಂತ್ರಿತ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ. ಶನಿವಾರದಿಂದ ರಾಜ್ಯವನ್ನು ಒಂದು ವಾರ ಮುಚ್ಚಲಾಗುವುದು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿದೆ.
ಮಂಗಳವಾರದಿಂದ ಪ್ರಾರಂಭವಾದ ಮಿನಿ ಲಾಕ್‌ಡೌನ್ ಯಾವುದೇ ಮಹತ್ವದ ಫಲಿತಾಂಶಗಳನ್ನು ತೋರಿಸಿಲ್ಲ ಎಂಬ ಪೊಲೀಸ್ ವರದಿಯನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಜಿಪಿ ಸ್ವೀಕರಿಸಿದ ವರದಿಯ ಪ್ರಕಾರ, 80 ಶೇ. ಜನರು ಅನಗತ್ಯವಾಗಿ ಪ್ರಯಾಣಿಸುತ್ತಿದ್ದಾರೆ ಮತ್ತು ಪ್ರಶ್ನಿಸಿದರೆ ಕ್ಷಮೆ ಕೇಳಿ ಜಾರಿಕೊಳ್ಳುತ್ತಾರೆ. ಈ ಬಗ್ಗೆ ಮುಖ್ಯಮಂತ್ರಿ ಕಚೇರಿಗೆ ಮಾಹಿತಿ ನೀಡಲಾದ ಹಿನ್ನೆಲೆಯಲ್ಲಿ ಗತ್ಯಂತರವಿಲ್ಲದೆ ಇಂತಹ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಮತ್ತು ಈಗಿರುವ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ನಿನ್ನೆ, ರಾಜ್ಯದಲ್ಲಿ ದ್ಯೆನಂದಿನ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳ ಉಂಟಾಗಿತ್ತು. 41,000 ಕ್ಕೂ ಹೆಚ್ಚು ಜನರಿಗೆ ವೈರಸ್ ಇರುವುದು ಪತ್ತೆಯಾಗಿದೆ.