ಕೋಝಿಕೋಡ್: ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಅತೀ ಕಡಿಮೆ ಸಂಖ್ಯೆಯ ಬಂಧು-ಮಿತ್ರರಿಗೆ ಮಾತ್ರ ಆಹ್ವಾನ ನೀಡಿದರೆ ಬಹುಮಾನವನ್ನು ಗೆಲ್ಲಬಹುದಾಗಿದೆ. ಅದೂ| ಪೋಲೀಸರಿಂದ! ಕೋಝಿಕೋಡ್ ಗ್ರಾಮೀಣ ಪೋಲೀಸರು ಹೊಸ ಬಹುಮಾನ ಯೋಜನೆಯನ್ನು ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಪ್ರಾರಂಭಿಸುತ್ತಿದ್ದಾರೆ.
ವೈಕಿಲಿಸೇರಿಯ ನವವಿವಾಹಿತರು ವಡಗರ ಗ್ರಾಮೀಣ ಎಸ್‍ಪಿಯಿಂದ ಈ ಯೋಜನೆಯ ಪ್ರಥಮ ಬಹುಮಾನವನ್ನು ಶುಕ್ರವಾರ ಸ್ವೀಕರಿಸಿದ್ದಾರೆ. ವಡಗರ ಗ್ರಾಮೀಣ ಎಸ್.ಪಿ ಅವರು ಸ್ವತಃ ಲಿಂಟೊ ಮಹೇಶ್ ಮತ್ತು ಕಾವ್ಯಾ ಅವರ ವಿವಾಹ ಕಾರ್ಯಕ್ರಮಕ್ಕೆ ತೆರಳಿ ಅವಲೋಕನ ನಡೆಸಿ ಇಬ್ಬರಿಗೂ ಪ್ರಶಂಸಾ ಪತ್ರಗಳನ್ನು ನೀಡಿದರು. ಇಂತಹ ಯೋಜನೆಯಿಂದ ಹೆಚ್ಚಿನ ಜನರು ಅನುಕರಣೀಯ ಸಮಾರಂಭಗಳನ್ನು ಮಾಡುವ ನಿರೀಕ್ಷೆ ಇದೆ ಎಂದು ಪೋಲೀಸರು ಆಶಯ ವ್ಯಕ್ತಪಡಿಸಿದ್ದಾರೆ.
ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ, ನೂರಾರು ಅತಿಥಿಗಳನ್ನು ಆಹ್ವಾನಿಸುವ ಜನರಿದ್ದು, ಅಂತವರಿಗೆ ಇದೊಂದು ಮಾದರಿ ಎಂದು ಪೋಲೀಸರು ತಿಳಿಸಿದ್ದಾರೆ. ನಿಬಂಧನೆಗಳನ್ನು ಗಾಳಿಗೆ ತೂರುವವರಿಗೆ ಬೇರೆಯದೇ ಉಡುಗೊರೆ ನೀಡಬೇಕಾಗುತ್ತದೆ ಎಂದೂ ಎಸ್.ಪಿ. ಎಚ್ಚರಿಕೆಯನ್ನೂ ನೀಡಿದ್ದಾರೆ.